Saturday 2 November 2019

ತಂಪು, ಕಂಪು, ಇಂಪು, ಪೆಂಪು !

ನನ್ನ ದೈನಂದಿನ ಮುಂಜಾನೆಯ ವಾಯುಸಂಚಾರದ ಸಮಯ ನಾಲ್ಕೂಮುಕ್ಕಾಲು - ಐದರಿಂದ,
ಆರು - ಆರೂವರೆಯವರಗೆ. ಬಹುತೇಕ ನಾನು ಹೊರಬೀಳುವ ಹೊತ್ತಿಗೆ ಜಗತ್ತಿನ್ನೂ ನಿದ್ದೆಯ
ಗುಂಗಿನಲ್ಲಿರುತ್ತದೆ. ನಸುಕಿನ ಆ  ತಂಪುಹವ, ಗಜಿಬಿಜಿಯಿಲ್ಲದ ಶಾಂತವಾತಾವರಣ ನನಗೆ
ಬಹಳ ಪ್ರಿಯವಾದದ್ದು. ನಾನು ನಡೆಯುವ ದಾರಿಯಲ್ಲಿ ಒಂದೆರಡು ಪಾರಿಜಾತದ ಗಿಡಗಳಿವೆ.
ರಾತ್ರಿ ಅರಳುವ ಈ ಹೂಗಳು ಬೆಳಗಿನಹೊತ್ತಿಗೆ ಕೆಳಗುದುರಿ ಗಿಡದಡಿಯಲ್ಲಿ ಚಿತ್ತಾರ ಮಾಡಿರುತ್ತವೆ.
ನಡೆಯುತ್ತಿರುವಾಗ, ಒಮ್ಮೊಮ್ಮೆ, ಬೀಸಿಬಂದ ತಂಗಾಳಿಯೊಡನೆ ಪಾರಿಜಾತದ ಸುಗಂಧ ಮೂಗಿಗೆ
ತಲುಪುವುದುಂಟು. ಹಾಗೆಯೇ, ಯಾವುದೋ ಮರದಲ್ಲಿ ಅಡಗಿ ಕುಳಿತ, ಯಾವುದೋ ಹಾಡು ಹಕ್ಕಿಯ
ಇಂಪಾದ ಇಂಚರ ಒಮ್ಮೊಮ್ಮೆ ಕಿವಿಗೆ ಬೀಳುವುದುಂಟು. ಹೊರಟ ಸಮಯ ಸರಿಯಿದ್ದು, ದಿಗಂತ
ಶುಭ್ರವಾಗಿದ್ದರೆ ಒಮ್ಮೊಮ್ಮೆ ಕೆಲವೇ ನಿಮಿಷಗಳ ಮಟ್ಟಿಗೆ, ಬಾನಿನಲ್ಲಿ ಕಿತ್ತಳೆ, ಕೆಂಪು, ಬಂಗಾರ ಬಣ್ಣಗಳ
ಸಿಂಗಾರ ನಾಟ್ಯ ಕಣ್ಣ ತಣಿಸುವುದುಂಟು. 
ಹತ್ತಾರು ವರುಷಗಳ ಕಾಲದಲ್ಲಿ ನಾನು ನೂರಾರುಬಾರಿ ಅನುಭವಿಸಿರುವ ಈ ಅಲ್ಪಸುಖಗಳ ಒಟ್ಟು
ಅನುಭವಗಳಿಗೆ ಒಂದು ರೂಪ ಕೊಡುವ ಪ್ರಯತ್ನ ಕೆಳಗಿನದು. 

ಇರುಳು ಮಳೆಬಿತ್ತಲ್ಲ 
ಮುಂಜಾನೆ
ಹೊರಹೆಜ್ಜೆಯಿಟ್ಟಾಗ 
ನೆಲಒದ್ದೆ 
ಹವೆ ತಂಪು ತಂಪು 


ಯಾರಮನೆಯಂಗಳದಿ  
ಅರಳಿಹುದೋ
ಪಾರಿಜಾತ
ಪರಿಸರವೆಲ್ಲಾ 
ಕಂಪು ಕಂಪು 


ನಸುಗತ್ತಲಿನ
ಮುಸುಕಿನಲೇ  
ನಿದ್ದೆತಿಳಿದೆದ್ದ 
ಹಾಡುಹಕ್ಕಿಯ ಗಾನ 
ಆಹಾ, ಇಂಪು ಇಂಪು 


ಗುಡ್ಡದ ಹಿಂದೆ 
ಅಡಗಿದ್ದ ರವಿ 
ಕೊಡವಿಕೊಂಡೆದ್ದಂತೆ
ಬಾನಾಯಿತು 
ಕೆಂಪು ಕೆಂಪು


ಮುದನೀಡುವ
ಈ ಅಲ್ಪಸುಖದ 
ಅನುಭವಗಳು   
ನನ್ನ ಜೀವಕ್ಕೆ 

ಪೆಂಪು,ಪೆಂಪು. 

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...