Sunday 12 June 2022

ಮುಂಗಾರು - ಬೀರು - ನಾರಾಯಣಾಯಸ್ವಾಹಾ





ಮುಂಗಾರಿನ ಮಳೆ ಹಿಡಿಯುತ್ತದೆ ಸೋನೆ 

ಒಮ್ಮೊಮ್ಮೆ ಬಡಿಯುತ್ತದೆ ಜಡಿದು 

ಸಾಕಾಗಿ ಜಿನುಗುತ್ತ ಮಲಗುತ್ತದೆ 

ಹಾಗೆಯೇ ಸುತ್ತಿ ಸುಳಿದು 



ಸೂರ್ಯನೂ ಮಲಗಿರುತ್ತಾನೆ 

ಒಮ್ಮೊಮ್ಮೆ ಕಣ್ತೆರೆದು 

ಕಿರಣಗಳನ್ನು ತೂರಿಸುತ್ತಾನೆ 

ಮೋಡಗಳ ಸಂದಿಯಿಂದ 



ಬೀದಿ ದೀಪಗಳಿಗೂ 

ಮುಂಗಾರಿನ ರಜೆ 

ಆಗೀಗ ಮಿಣ್ಣಗೆ ಮಿಣುಕುತ್ತವೆ 

ಮತ್ತೆ ತಣ್ಣಗೆ ಮಲಗುತ್ತವೆ 



ನನ್ನ ತಿರುಗಾಟದ ಹುಚ್ಚು ನನಗೆ 

ಸುರಿವ ಮಳೆಯಲ್ಲೂ 

ಕೊಡೆಹಿಡಿದು ನಡೆಯುತ್ತೇನೆ 

ಕತ್ತಲಲ್ಲಿ ಕೊಚ್ಚೆ ತುಳಿಯುತ್ತೇನೆ 



ನನ್ನ ಕತ್ತಲೆಯ ದಾರಿಯಲ್ಲುಂಟು 

ಪೆದ್ರುವಿನ ಗಡಂಗು 

ಗಡಂಗೆಂದರೆ ತಿಳಿಯಿತೇ?

ಬಾರು ರೆಸ್ಟಾರೆಂಟು 



ಅವನ ರೆಸ್ಟಾರೆಂಟಿಗೆ 

ಅಂಟಿಕೊಂಡಿರುವ 

ನಿತ್ಯದ ಗಿರಾಕಿಗಳುಂಟು 

ನಾಯ್ಕ, ಪರಬ, ಪಿಂಟು 



ಬಾರಿನ ನಂದಾದೀಪದ 

ಮಂದಬೆಳಕಿನಲ್ಲಿ 

ಕೂತು ಮೇಜಿನ ಮುಂದು 

ಗುಟುಕರಿಸುತ್ತಾರೆ ಗುಂಡು 



ಜತೆಗುಂಟು ಪೆದ್ರುವಿನ ಪತ್ನಿಯ 

ಹೆಸರಾಂತ ಕೈರುಚಿ 

ಹುರಿದ ಮೀನು, ಕರಿದ ಕೋಳಿ 

ಮತ್ತು ಪಕ್ಕದ ಪೊದೇರನ ಪೋಳಿ  



ಅದೇನು ನಿಶ್ಯಬ್ದ ತನ್ಮಯತೆ 

ಆನಂದ ಶಾಂತಿ 

ಕಾಣಸಿಗದು ನಿಮಗೆಲ್ಲೂ 

ಯಾವ ಧ್ಯಾನಮಂದಿರದಲ್ಲೂ !



ನನ್ನ ಮನಸ್ಸೆನ್ನುತ್ತದೆ 

ನೋಡುತ್ತ ನಿಲ್ಲಬೇಡ ಗುಗ್ಗು 

ಒಳಗೆ ನುಗ್ಗು 

ಹಾಕೊಂದು ಪೆಗ್ಗು !



ಆದರೆ ನೋಡಿ, ಈ ಸಂಸಾರದ 

ಕೋಟಲೆಯಿಂದ ಪಾರಾಗಿ 

ಭಗವಂತನೆಡೆಗೆ ಅಡಿಯಿಡುವುದು 

ಅದೆಷ್ಟು ಕಷ್ಟವೋ 



ಭಗವಂತನ ಕೋಟಲೆಯಿಂದ 

ಬಿಡಿಸಿಕೊಂಡು 

ಬಾರಿನೊಳಗೆ ನುಗ್ಗುವುದೂ 

ಅಷ್ಟೇ ಕಷ್ಟ 



ಹಾಗಾಗಿ ನಾನು 

ನಿರಾಸೆಯಿಂದ ನೋಡುತ್ತಲೇ 

ನಿಧಾನವಾಗಿ ಕಾಲೆಳೆಯುತ್ತೇನೆ 

ಕತ್ತಲೆಯಲ್ಲಿ ಮನೆಗೆ 



ಕಾಲ್ತೊಳೆದು ಕೂತು, ಮರೆತು ಬೀರು,

ಹೀರುತ್ತೇನೆ ಕೈಯಿಂದ ನೀರು 

ಕೇಶವಾಯಸ್ವಾಹಾ, ನಾರಾಯಣಾಯಸ್ವಾಹಾ, 

ಮಾಧವಾಯಸ್ವಾಹಾ ..... ....... 



(ಪೊದೇರ - ಪೋರ್ಚುಗೀಸಿನ ‘padeiro’ ಶಬ್ದ ರೂಪಾಂತರಗೊಂಡು ಗೋವೆಯ ಕೊಂಕಣಿಯಲ್ಲಿ 

‘ಪೊದೇರ’ ಆಗಿದೆ. ರೊಟ್ಟಿಮಾಡುವವ, ‘baker’ ಎಂದರ್ಥ.   ‘ಪೋಳಿ’ - ಕಚ್ಚಾ ಗೋಧಿಹಿಟ್ಟಿನಿಂದ

ತಯಾರಿಸಿದ ಗುಂಡನೆಯ, ದಪ್ಪವಾದ, ಮೆದುವಾದ ರೊಟ್ಟಿ.   ) 







ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...