ದೇಶಕ್ಕೆ ಬೀಗ ಬಿಗಿದಿದ್ದರೂ, ಮುಂಜಾನೆ ಬೆಳಕಾಗುವ ಮುಂಚೆ ಬೀಗ ಸಡಿಲಿಸಿ ಅರ್ಧತಾಸು ವಾಯುಸಂಚಾರ
ಮಾಡಿಬಿಡುತ್ತೇನೆ. ನಮ್ಮ ಮನೆಯ ಸಮೀಪದಲ್ಲಿರುವ ಒಂದು ಸಣ್ಣ ತೊರೆಯ ಸುತ್ತಮುತ್ತ ಬೆಳೆದುಕೊಂಡು,
ಉಳಿದುಕೊಂಡಿರುವ ಮರಗಳಲ್ಲೊಂದರಲ್ಲಿ ‘ಮಲಬಾರ ವಿಸಿಲಿಂಗ್ ತ್ರಷ್’ ಎಂದು ಕರೆಸಿಕೊಳ್ಳುವ ಈ ಹಕ್ಕಿಯ
ಗಾನ ವರುಷಕ್ಕೊಮ್ಮೆ, ಕೆಲವುದಿನಗಳ ಕಾಲ, ತಪ್ಪದೆ ಕೇಳಿಬರುತ್ತದೆ.
ನಾನು ಒಮ್ಮೆಯೂ ಆ ಜಾಗದಲ್ಲಿ ಅದನ್ನು ಕಂಡಿಲ್ಲ. ಆದರೆ ವರುಷಕ್ಕೊಮ್ಮೆ ಆ ಹಕ್ಕಿ ಕೂಗಿ, ತಾನಿನ್ನೂ
ಬದುಕಿದ್ದೇನೆಂದು ತಿಳಿಸಿದರೆ ನನ್ನ ಮನಸ್ಸಿಗೆ ಅದೇನೋ ಸಮಾಧಾನ. ಈ ವರುಷ ಸಮಯ ಮೀರಿದರೂ
ಅದರ ಕರೆ ಕೇಳಿಬರದೆ ಕೊಂಚ ಬೇಸರವಾಗಿತ್ತು. ಈ ಮುಂಜಾನೆ ಅದನ್ನು ಕೇಳಿ ಬಹಳ ಸಂತೋಷವಾಯಿತು.
ಆ ಸಮಯದಲ್ಲಿ ಹೊಳೆದ ಕೆಲವು ಸಾಲುಗಳನ್ನು ಬೆಳಸಿ ಇಲ್ಲಿ ತಂದಿದ್ದೇನೆ.
ಮುಂಜಾನೆಯ ನಿಶ್ಯಬ್ಧ ವಾತಾವರಣದಲ್ಲಿ, ಅದೆಲ್ಲೋ ಕೊಂಚ ದೂರದಲ್ಲಿ, ಗಿಡ ಮರಗಳ ಮಧ್ಯದಿಂದ
ತೂರಿಬರುವ ಆ ಗಾನ ಮನಸ್ಸಿಗೆ ಆಹ್ಲಾದಕಾರಕವೆನಿಸುತ್ತದೆ.
ಹಕ್ಕಿಯನ್ನು ಕಂಡಿಲ್ಲದವರ ಅನುಕೂಲಕ್ಕೆಂದು ಅದರ ಚಿತ್ರವನ್ನು ಇಲ್ಲಿ ತಂದಿರಿಸಿದ್ದೇನೆ.
ಗಾನ, ಚಿತ್ರ, ಅಂತರಜಾಲದಿಂದ ಪಡೆದುಕೊಂಡದ್ದು.
ಸಾಲುಗಳು ನಾನು ಓದಿರುವ, ಮತ್ತು ಆ ಮೂಲಕ ನನ್ನ ಮನದಲ್ಲಿ ಹೊಕ್ಕು ಹುದುಗಿರುವ ಅದೆಷ್ಟೋ
ಮಹಾನುಭಾವರ ಬರಹಗಳ ಪ್ರಭಾವ.
ಬೆರಳಚ್ಚು ಮಾಡಿದವ ನಾನೆಂದು ಧೈರ್ಯವಾಗಿ ಹೇಳಬಲ್ಲೆ !
ಈ ಹಕ್ಕಿ ಕೂಗುವುದ ಕೇಳಿದೆ
ಅರೆಗತ್ತಲಿನ ಬೆಳಗಿನಲ್ಲಿಂದು.
ಅದೇನು ವಿಶೇಷ ಎನ್ನುವಿರೇನೋ ?
ವಿಶೇಷ ಹೀಗಿದೆ ನೋಡಿ.
ಇದು ದಿನವಿಡೀ ಕೂಗುವುದಿಲ್ಲ,
ತ್ರ.
ವರುಷವಿಡೀ ಕೂಗುವುದಿಲ್ಲ,
ವಸಂತದಲ್ಲಿ ಮಾತ್ರ.
ಮತ್ತೆ, ನಾನದನು ಕಂಡಿಲ್ಲ
ಆಲಿಸಿದ್ದೇನೆ ಮಾತ್ರ !
ನಿಜವೆಂದರೆ, ಇದು ಕೂಗುವುದಿಲ್ಲ,
ಕೋಗಿಲೆಯಂತೆ,
ಪದೇ ಪದೇ ಒಂದೇರಾಗದಲ್ಲಿ.
ಈ ಹಕ್ಕಿ ಹಾಡುತ್ತದೆ,
ಸುಮಧುರವಾಗಿ,
ಸರಾಗವಾಗಿ, ಸ್ಪಷ್ಟವಾಗಿ,
ಸಂಗೀತದಂತೆ !
ಮತ್ತಿದು
ಎಲ್ಲೆಂದರಲ್ಲಿ ಅಲೆಯುತ್ತಾ
ವಲಸೆಹೋಗುವುದಿಲ್ಲ.
ವರುಷ ವರುಷಗಳ ಕಾಲ
ಇರುತ್ತದೆ ಇರುವೆಡೆಯೆಲ್ಲೇ.
ಯಾರರಿವಿಗೂ ಬಾರದಂತೆ
ಹಾರಾಡುತ್ತ, ಅಲ್ಲೇ
ಸುತ್ತಮುತ್ತ.
ವೈಶಾಖದ ಬಿಸಿಲು
ವರ್ಷಕಾಲದ ಮಳೆಯಂತೆ
ವಸಂತದ ಈ ಗಾನ
ಋತುಗಳ ತಾನ
ಸರಿಯುಂಟೆಂಬ ಭಾವನೆ
ನೀಡುತ್ತದೆ ನನಗೆ.
ಅದರಿಂದಲೇ,
ಕಳವಳವಾಗಿತ್ತು ಮನಸಿಗೆ
ಗಾನಕೇಳದೆ ಈವರೆಗೆ.
ಹಾಡು ಕೇಳಿಬಂತು
ಇಂದು ಮುಂಜಾನೆ
ಪ್ರತಿ ವಸಂತದಂತೆ
ತಾನ ತಪ್ಪದಂತೆ
ಕಿವಿಗಿಂಪೆನಿಸುವಂತೆ
ಮನಹಗುರವಾಗುವಂತೆ
ಎರಡು ಸಾಲು ಮೂಡುವಂತೆ !
ಬರೆದೆ ನೋಡಿ ಇಷ್ಟೆಲ್ಲಾ,
ಆ ಹಕ್ಕಿಯ ಹೆಸರೇ
ನನಗೆ ತಿಳಿದಿರಲಿಲ್ಲಾ !
ಅದು ಗೊತ್ತಾದದ್ದು ಇದೀಗ,
ಗೂಗಲಿಸಿ ನೋಡಿದಾಗ !
ಹೆಸರೂ ಸುಂದರ,
ಗಾನದಂತೆಯೇ ಮಧುರ !
ಗೋಪೀಹಕ್ಕಿ ಯಂತೆ !
ಕೃಷ್ಣನ ಕೊಳಲಿನ
ನೆನಪೇ ?!