Saturday 23 February 2019

ಹೂವಿನ ಚುಕ್ಕೆ, ಭಿತ್ತಿಯಾದ ಬಾನು , ಬೆಟ್ಟ ಹಿಮಾಲಯವಾಗದೋ





ಚೆನ್ನೈ ದಿಂದ ಬೆಂಗಳೂರಿಗೆ ಪಯಣಿಸುವಾಗ, ಜೋಲಾರಪೇಟೆ ನಿಲ್ದಾಣ ದಾಟಿದ ಮೇಲೆ ಕಾಣಸಿಗುವ ದೂರದ ಬೆಟ್ಟಗಳ  
ತುದಿಯಲ್ಲಿದ್ದ ಬಿಳಿಕಲ್ಲಿನ ಬಂಡೆಗಳು, ಶಿಖರಕ್ಕೆ ಮುಸುಕಿದ ಹಿಮದಂತೆ ಕಂಡವು. ಆ ದೃಶ್ಯ ಕಂಡಾಗ ಮನಸ್ಸಿಗೆ
ಹೊಳೆದ ಸಾಲುಗಳು

ಹೊಳೆವುದೆಲ್ಲ  ಬಂಗಾರವಲ್ಲ,
ಬೆಳ್ಳಗಿರುವುದೆಲ್ಲ ಹಾಲಲ್ಲ,
ದೂರ ಬೆಟ್ಟದ ಮೇಗಡೆ
ಬಿಳಿ ಮುಸುಕು ಕಂಡೊಡೆ
ಮುಸುಕು ಹಿಮವಾಗದು
ಬೆಟ್ಟ ಹಿಮಾಲಯವಾಗದೋ
ಮರುಳೇಶ್ವರಾ



ಹಚ್ಚ ಹಸಿರಿನ ನಡುವೆ
ಅಚ್ಚ ಬಿಳಿ ಹೂ ಚುಕ್ಕೆ,
ಕಾರಿರುಳ ಆಗಸದಿ   
ಚಿಕ್ಕೆಗಳ ಚುಕ್ಕೆ    


ಒಮ್ಮೊಮ್ಮೆ ಕಂಡಾಗ   
ಒಂದೊಂದು ಹೊಸಪರಿ
ಬಣ್ಣಿಸಬಯಸಿ ಸೋತೆ

ನಾ ಬಾರಿ ಬಾರಿ

ಭಿತ್ತಿಯಾದ ಬಾನು


ಬಾನಿನ ಭಿತ್ತಿಯಮೇಲೆ
ಸಂಜೆಯ ಬಣ್ಣ ಹರಡಿ   
ರೆಂಬೆ ಕೊಂಬೆ ಕುಂಚದಿಂದ
ಪ್ರಕೃತಿ ಬಿಡಿಸಿದ
ಬೆರಗಿನ ಚಿತ್ರ !




Wednesday 6 February 2019

ಮೂರು ಹೆಸರಿಲ್ಲದ ಸಣ್ಣ ಕವಿತೆಗಳು



ಮೋಡ  ಮುಚ್ಚಿದ ಮುಂಜಾನೆ
ಮೋರೆ ಮುಚ್ಚಿಕೊಂಡಿದ್ದ ಸೂರ್ಯ
ಮುಗಿಲ ಕೆಂಪಾಗಿಸ ಮರೆತಾಗ
ಮನೆಯ ಮುಂದಿನ ಮರ
ಮನಬಿಚ್ಚಿ ತನ್ನ ಕೆಂಪನ್ನಿತ್ತು

ಮನವ ಮುದಗೊಳಿಸಿತು 



ಸದ್ದಿಲ್ಲದೆ ಸೂರ್ಯ ಮೂಡಣದೊಳೆದ್ದಿಹನು
ನಿದ್ದೆ ಕದ್ದೊಯ್ಯಲೆಂದು ! 

ದಿನಕ್ಕಿಂತ ಚಳಿ
ಇಂದು ಕೊಂಚ ಹೆಚ್ಚು.
ಸೂರ್ಯನೂ ಮುದುರಿ
ಮಲಗಿದ್ದಾನೆ
ತೆಳ್ಳನೆಯ ಮೋಡಗಳ
ಹಚ್ಚಡ ಹೊದ್ದು.
ಅವನಿಗುಂಟು ಆ ಸ್ವಾತಂತ್ರ್ಯ
ನಮಗುಂಟೆ?

ಘಂಟೆಯ ದಾಸರಿಗೆ ?
ಎಂಟಾಗುತ್ತ ಬಂತು
ಉಂಟು ಹದಿನೆಂಟು ಕೆಲಸ
ಹೊಂಟೆ ನೆಂಟರೆ
ಶುಭದಿನ ನಿಮಗೆ
















Tuesday 5 February 2019

ಕಲಿಯುಗಕೆ ಸಿಲುಕಿಹ ಭಜರಂಗಬಲಿ

ಅಂಜನಿಯ ಸುತ ಆಂಜನೇಯ,
ಪಿಡಿದು ವಜ್ರಾಯುಧದಿ ಬಡಿದರೂ
ದವಡೆಮಾತ್ರ ಬಲಿಕೊಟ್ಟು,
ಹನೂಮಂತನಾಗುಳಿದೆ


ತ್ರೇತೆಯಲ್ಲಿ  ರಾಮಭಂಟ
ಸಾಗರವ ದಾಟಲೆರಗಿ
ಸುರಸೆ ನುಂಗಬಯಸಿದಾಗ
ಸರಸದಿಂದ  ಬಾಯಹೊಕ್ಕು
ವಿರಸವಿಲ್ಲದೆ ಹೊರಬಂದೆ !


ದ್ವಾಪರದಿ ದುರ್ಯೋಧನ
ಬೆಂಕಿಯಿಟ್ಟರೂ ಬದುಕುಳಿದು
ಗದೆಯೆದುರಿಸಿ,ಸದೆಬಡಿದು
ಬಲಭೀಮನೆನಿಸಿಕೊಂಡೆ


ಭಜರಂಗಬಲಿ ಎನಿಸಿ  
ಕಲಿಗಾಲದಿ ನಲಿದವನು
‘ದಲಿತ’ ನಾದ ಮರುಕ್ಷಣವೇ
‘ಆಲಿ’ ಯಾಗಿ ಹೋದೆಯಲ್ಲಾ !

ಕಲಿಯುಗದ ಕಲಿಗಳಿಗೆ   
ಸಿಲುಕಿಹೆ ಹನುಮಾ,
ಬಲಿಯಾಗುವೆ ಹುಲುಮನುಜರಿಗೆ !
ಕಾಲಪಿಡಿದ ಎನ್ನ
ಕಾಳಜಿಬಿಟ್ಟು, ನಿನ್ನ
ಬಾಲಉಳಿಸಿಕೊಳೋ ಜೀವೋತ್ತಮಾ !




Monday 4 February 2019

ಮಾವಿನ ಮನಸು



ನನ್ನ ಜೀವದ ಊಟೆ
ಯಾರ ಅಜ್ಜ, ಯಾರ ಪಿಜ್ಜ
ಯಾರು ನೆಟ್ಟ ಓಟೆಯೋ ?
ಅರಿವು ನನಗಿಲ್ಲ

ನಾನೀಯುವ ಫಲ
ಯಾವ ಹಲ್ಲಿಗೆ
ಯಾರ ಕಲ್ಲಿಗೆ  
ಕೊಕ್ಕೆಗೋ
ಇಲ್ಲ ಕೊಕ್ಕಿಗೋ
ಯಾರ ತೆಕ್ಕೆಗೆ ?
ಪರಿವೆ ನನಗಿಲ್ಲ

ಮೈತುಂಬ ಹೂವಾಗಿ
ತೂಗುತ್ತ ಹಣ್ಣಾಗಿ
ಸಂಭ್ರಮದಿ ವರುಷ ವರುಷ
ಕಳೆಯುತ್ತ ಜಗದ ಹಸಿವ
ಮೊಳೆಯುತ್ತದೆನ್ನ ಸಸಿಯು
ಇದಕಿಂತ ಬೇಕೆ ಹರುಷ !

ರವಿ ಹತ್ತಿರದಲ್ಲಿ !



ರವಿ ಕಾಣುತ್ತಾನೆ ಪ್ರತಿದಿನ
ಅಲ್ಲೆಲ್ಲೋ ದೂರದಲ್ಲಿ   
ಆಕಾಶದಲ್ಲಿ
ಅತಿ ಎತ್ತರದಲ್ಲಿ
ಒಮ್ಮೊಮ್ಮೆ ಮೂಡಣದ
ಗಿರಿನೆತ್ತಿಯಲ್ಲಿ
ಇಲ್ಲ, ಪಡುವಣ
ದಿಗಂತದಲ್ಲಿ  
ಸಾಗರದ
ಬಂಗಾರದಂಚಿನಲ್ಲಿ
ಆಗೀಗ,
ಮೋಡಗಳ ಮುಸುಕಿನಲ್ಲಿ.  


ಹೀಗೆ ಕಂಡಿದ್ದಿಲ್ಲ
ಇಲ್ಲೇ ಹತ್ತಿರದಲ್ಲಿ
ಎದುರುಮನೆಯ ಮಾಳಿಗೆಯಲ್ಲಿ
ಬಂಗಾರದ ಹಣ್ಣಿನಂತೆ
ಹೊಳೆಯುತ್ತ
ರೆಂಬೆ ಕೊಂಬೆ ಸಂದಿಯಲ್ಲಿ.


ಅದರಿಂದಲೇ ಇಂದು
ಅವನಿಲ್ಲಿ.  
ನನ್ನ ಕವನದ
ಸಾಲಿನಲ್ಲಿ.    
ನಿಮ್ಮ ಎದುರಿನಲ್ಲಿ !   




ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...