Friday 25 September 2020

ಮಳೆಗಾಲದ ಮುಂಜಾವು

ಮಳೆಗಾಲವಲ್ಲವೇ ? ಒಂದು ವಾರದಿಂದ ಬಿಡದೆ ಸುರಿಯುತ್ತಿದೆ

ಮಳೆ. ಸುರಿಯುವ ಮಳೆಯಿಂದ ನಮ್ಮ ಬೀದಿಯ ಎಲ್ ಈ ಡಿ

ದೀಪಗಳಿಗೂ  ಥಂಡಿಯಾಗಿ ಅವು ಥಣ್ಣಗೆ ಕಣ್ಮುಚ್ಚಿ ಕುಳಿತಿವೆ.

ನಸುಕಿನಲ್ಲಿ ಐದುಘಂಟೆಯ ಸಮಯ. ಸುರಿಯುತ್ತಿರುವ ಮಳೆ,

ಮಳೆಯಿಂದಾಗಿ ಅಲ್ಲಲ್ಲಿ ಪಾಚಿಕಟ್ಟಿದ ರಸ್ತೆ, ರಸ್ತೆಯಲ್ಲಿ ಹರಿವ ನೀರು,

ಕೃಷ್ಣಪಕ್ಷದ ಕತ್ತಲು, ಅರವತ್ತು ದಾಟಿದ ಕಣ್ಣುಗಳು, ಕಳಚಿಕೊಳ್ಳಲು

ಸಮಯ ಕಾದಿರುವ ಕೈಕಾಲುಗಳು ! ಅವಘಡಕ್ಕೆ ಅಹ್ವಾನವಲ್ಲವೇ?

ಅಲ್ಲದೆ  ನೀರಿನೊಡನೆ ಹಾವೋ ಮತ್ತೊಂದೋ ಕೂಡ

ಹರಿಯುತ್ತಿರಬಹುದು. ಆದರೆ ಅಭ್ಯಾಸ ಬಿಡದು. ಹಾಗೆಂದೇ,

ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಲ್ಲಿ ಕೈದೀಪ (ಟಾರ್ಚ್)

ಹಿಡಿದು  ಸಂಚಾರ ಹೊರಟಿದ್ದೆ. ನನ್ನ ಕೈದೀಪದ ಪ್ರಖರ ಬೆಳಕು 

ಕತ್ತಲನ್ನು ಕತ್ತರಿಸಿ ಹರಿವ ನೀರಿನಮೇಲೆ ಸರಿಯುತ್ತಿತ್ತು. 

ಇದು ಕೆಳಗಿನ ಸಾಲುಗಳ ಸಂಧರ್ಭ. 


ಮಳೆಗಾಲದ ಮುಂಜಾವು 


ಹರಿವ ನೀರಿನ 

ರಂಗಮಂಚದ ಮೇಲೆ 

ಸುರಿವ ವರ್ಷಧಾರೆ 

ಸೃಷ್ಟಿಸಿದೆಯೊಂದು 

ಜಲಲಾಸ್ಯದ ಜಾಲ 


ನೀರ ನರ್ತನಕ್ಕೆ,  

ತಲೆಯ ಮೇಲಿನ 

ಕೊಡೆಯ ಮೇಲ್ಗಡೆ 

ಕುಣಿವ ಹನಿಗಳ 

ಟಪ ಟಪ ತಾಳ 


ಬೆಳಕು ಶಬ್ದಗಳ 

ಈ ಮೇಳಕ್ಕೆ 

ಅಕ್ಕಪಕ್ಕದಲಿ 

ಕಿಕ್ಕಿರಿದಿರುವ 

ಹಸುರಿನಲಿ ಹುದುಗಿರುವ 

ಕೋಟಿ ಕೀಟಗಳ 

ಹಿಮ್ಮೇಳ !


ಮೂರು ಚುಟುಕಗಳು / ದಿನಕರ ದೇಸಾಯಿ

ಸುಪ್ರಭಾತ 


ಬೆಲ್ಲದಂಥ ನಿದ್ದೆಕಳೆದು  

ಮೆಲ್ಲನೆ ಕಣ್ಣ ತೆರೆವಾಗ 

ಗಲ್ಲಿಯ ಮಸೀದಿಯಲ್ಲಿ  

ಅಲ್ಲಾನ ಹೆಸರೆತ್ತಿ  

ಮುಲ್ಲಾ ಕರೆಯುತ್ತಿದ್ದ 

ಎಲ್ಲಾ ಬನ್ನಿರೆಂದು !



ದಿಟವೆನಿಸಿದ್ದನ್ನು, ದಿಟ್ಟವಾಗಿ 

ಎಲ್ಲರಿಗೂ ಎಟಕುವಂತೆ

ನಾಲ್ಕು ಸಾಲುಗಳಲ್ಲಿ ಭಟ್ಟಿಯಿಳಿಸಿ, 

ಚುಟುಕಬರೆದು  ಪುಟದಲ್ಲಿರಿಸಿ 

ಓದುಗರೆಲ್ಲರ ಮನತಟ್ಟಿದ 

ಚುಟುಕುಬ್ರಹ್ಮ ದಿಟ್ಟ ದಿನಕರರಿಗೆ 

ತಟ್ಟುವೆ ಈ ಮೂಲಕ, ನನ್ನ ಚಪ್ಪಾಳೆ !


ಮತ್ತೊಂದು ಚುಟುಕ. ಅದರ  ಹಿನ್ನೆಲೆ ಹೀಗಿದೆ. ನಾನು ಮುಂಜಾನೆ

ಸಂಚಾರಕ್ಕೆ ಹೋಗುವಾಗ  ನನ್ನೊಡನೆ ಕೆಲವು ಸ್ನೇಹಿತರೂ

ಇರುವುದುಂಟು. ವಿವಿಧ ಮನೋಭಾವಗಳ, ಅನೇಕ

ವಯೋಮಾನಗಳ ಮಿತ್ರರ ಗುಂಪು ಅದು. 

ಮೊನ್ನೆ ಬೆಳಗ್ಗೆ ನಾವು ನಡೆಯುತ್ತಿದ್ದಾಗ, ಎದುರಿನ ಗುಡ್ಡಗಳಮೇಲೆ

ಆಗತಾನೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದ.  ಬಗೆ ಬಗೆಯ ಬಣ್ಣಗಳ

ನಾಟ್ಯ ನಡೆದಿತ್ತು. ಎಲ್ಲರೂ ಅದನ್ನು ನೋಡಿ ಮೆಚ್ಚಿ  

ಮಾತನಾಡುತ್ತಿದ್ದಾಗ, ಒಬ್ಬ ತರುಣ ಮಿತ್ರ, ಎದುರಿನಿಂದ

ಬರುತ್ತಿದ್ದ ತರುಣಿಯ ಕಡೆ ನೋಡುತ್ತಾ ಹೇಳಿದ 

“ಸೂರ್ಯೋದಯಕ್ಕಿಂತ ಸುಂದರವಾದದ್ದು ಬೇಕಾದಷ್ಟಿದೆ !”  

ಆ ಮಾತಿನಿಂದ ಪ್ರೇರಿತವಾದದ್ದು ಈ ಚುಟುಕ. 

ಪ್ರಾಸಬದ್ಧವಾದ ಒಂದು ವಿನೋದವಷ್ಟೇ. ಮತ್ತೇನೂ ಅಲ್ಲ. 

 


ದೂರಬೆಟ್ಟಗಳ ಹಸಿರು ಶಿಖರಗಳ 

ಎತ್ತರದ ಸುತ್ತಮುತ್ತ 

ನೆರೆದ ಮೇಘಗಳೊಡನೆ ಎಳೆರವಿಯ ಕಿರಣಗಳ 

ಬಗೆಬಗೆಯ ರಂಗಿನಾಟ 

ದಿನಮಣಿಯ ಕಂಡು ಮನ ತಣಿಯಲೆಂದು 

ಭಗವಂತ  ಕಣ್ಗಳಿತ್ತ. 

ಅವನಿತ್ತ ಕಣ್ಣು ಕುಣಿಯುತ್ತಲಿತ್ತು   

ಲಲನಾಮಣಿಯ ಸುತ್ತಮುತ್ತ 






ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...