Saturday 2 April 2022

ಯುಗಾದಿಯ ಶುಭದಿನದಂದು ಕೊಂಚ ಚಿಂತನೆ ಮತ್ತು ಸ್ತುತಿ.  



ಏನೋ ಓದಿದಾಗಲೋ, ಕೇಳಿದಾಗಲೋ, ಅಥವಾ ಮತ್ಯಾವುದೋ ಚಿಂತನೆಯಸಮಯದಲ್ಲೋ

ನನ್ನ ಮನದಲ್ಲಿ ಮೂಡುವ ಕೆಲವು ವಿಷಯಗಳನ್ನು ಅಥವಾ ಭಾವನೆಗಳನ್ನು ಒಂದು

ಬರಹದರೂಪಕ್ಕೆ ತಂದಿರಿಸುವುದು 

ನನ್ನ ದೊಂದು ಹವ್ಯಾಸ.  ಅದು ಗದ್ಯರೂಪದಲ್ಲಿರಬಹುದು ಅಥವಾ ಪದ್ಯವಾಗಿರಬಹುದು.

ತಲೆಯಲ್ಲಿ ಸುಳಿದಾಡುವ ವಿಷಯಗಳಿಗೆ ರೂಪಕೊಟ್ಟು ಒಂದೆಡೆ ಬರೆದಿರಿಸಿದಾಗ  ಅದೇನೋ

ಸಮಾಧಾನ. ಈ ಬರಹಗಳನ್ನು ಮತ್ತೊಬ್ಬರು ಓದಿ ಮೆಚ್ಚಿದರೆ  ಮನದಲ್ಲಿ ಒಂದು ಸಾರ್ಥಕ

ಭಾವನೆ ಮೂಡುತ್ತದೆ. ಆ ಸಾರ್ಥಕ ಭಾವನೆಯ ಹಿಂದೆಯೇ ತಲೆಯೆತ್ತುವುದು ಅಹಂಭಾವ.

ನಾನು ಇಂಥ ಬರಹವನ್ನು ಬರೆಯಲು (ಕಾರ್ಯವನ್ನು ಮಾಡಲು) ಶಕ್ತನಾಗಿದ್ದೇನೆಂಬ ಅಹಂಭಾವ. 


ನಾನು ಬರೆದ ಬರಹ ನನ್ನೊಬ್ಬನದೇ ಪ್ರಯತ್ನವೇ ? ಅಲ್ಲ. ಅದರ ಹಿಂದೆ ನಾನು ಓದಿದ

ಅನೇಕ ಪುಸ್ತಕಗಳ ಪ್ರಭಾವವಿದೆ. ಮತ್ತೊಬ್ಬರಿಂದ ಕೇಳಿದ ಅನೇಕ ವಿಷಯಗಳ ಪ್ರಭಾವವಿದೆ.

ನನಗೆ ಓದು ಬರಹ ಕಲಿಸಿಕೊಟ್ಟ ಅಧ್ಯಾಪಕರ ಪ್ರಯತ್ನವಿದೆ. ನಿತ್ಯ ಜೀವನದಲ್ಲಿ ಕಾಣುವ,

ಕೇಳುವ, ಒಡನೆ ವ್ಯವಹರಿಸುವ ಅನೇಕರಿಂದ ಅಪ್ರಯತ್ನವಾಗಿ, ಪ್ರಾಸಂಗಿಕವಾಗಿ ತಿಳಿದುಕೊಂಡಿದ್ದು,

ಬರಹದಲ್ಲಿ ಅಳವಡಿಸಿಕೊಂಡಿರುವ ವಿಷಯಗಳಿವೆ, ತಂದೆ ತಾಯಿಯರಿತ್ತ  ಸಂಸ್ಕಾರದ ಪ್ರಭಾವವಿದೆ. 

ಸ್ನೇಹಿತರೊಡನೆ ನಡೆಸಿದ ಬಿರಟೆಯಿಲ್ಲದ ಹರಟೆಯ ಪ್ರಭಾವವಿದೆ. ಒಟ್ಟಿನಲ್ಲಿ, ನನ್ನ ಬುದ್ಧಿಗೆ ತಿಳಿಯುವ,

ತಿಳಿಯದ, ಅನೇಕ ಶಕ್ತಿಗಳು ನನ್ನ ಬರಹದ ಹಿಂದೆ ಇವೆ. ನನ್ನ ಇಂದ್ರಿಯಗಳಿಗೆ ಎಟುಕಿದೆಲ್ಲವನ್ನೂ 

ತಲೆಯಲ್ಲಿ ಮಂಥನಮಾಡಿ, ನನ್ನ ತಿಳುವಳಿಕೆಯನ್ನು ಅದಕ್ಕೆ ಸೇರಿಸಿ ಬರೆದ ಪ್ರಯತ್ನ, ಶಕ್ತಿ, ನನ್ನದೇ.

ಆದ್ದರಿಂದ ನಾನು ಬರೆದದ್ದು ನನ್ನ ಸ್ವಂತ ಪ್ರಯತ್ನ ಅಥವಾ ಶಕ್ತಿಯಿಂದಲೇ ಎಂದು ತಿಳಿದು ಗರ್ವ

ಪಡುವುದರಲ್ಲಿ ತಪ್ಪೇನೂ ಇಲ್ಲ.  ಆದರೆ ಅಂಥ ತಿಳುವಳಿಕೆ, ‘ಅಹಂಭಾವ’ ಎನಿಸಿಕೊಳ್ಳುತ್ತದೆ.

ಮಾನವ ಸ್ವಭಾವದಲ್ಲಿರುವ ತ್ರಿಗುಣಗಳಲ್ಲಿ ಒಂದಾದ ‘ರಾಜಸಗುಣ’ ವಾಗುತ್ತದೆ. 


“ನನ್ನ ಬರಹ ನನ್ನ ಪ್ರಯತ್ನವಾದರೂ ಅದರ ಹಿಂದೆ ನನಗೆ ಕಾಣದ, ಅವಗಾಹನೆಗೆ ಬಾರದ,

ಅನೇಕ ಶಕ್ತಿಗಳ ಪ್ರಭಾವವಿದೆ. ಅದು ಪೂರ್ಣವಾಗಿ ನನ್ನದಲ್ಲ. ನಾನು ನನ್ನ ಬರಹಕ್ಕೆ ಸಹಾಯಮಾಡಿದ

ಆ ಶಕ್ತಿಗಳಿಗೆ ನಾನು ಋಣಿಯಾಗಿದ್ದೇನೆ” ಎಂಬ ದೈನ್ಯಪೂರ್ಣ ಭಾವನೆ ನನ್ನ ಗರ್ವವನ್ನು ಇಳಿಸುತ್ತದೆ.

ಅಹಂ ಅನ್ನು ಕಡಿಮೆಮಾಡುತ್ತದೆ. ಅದು ‘ಸಾತ್ವಿಕ ಗುಣ’.  


ಈ ರೀತಿ ನಮ್ಮ ಎಲ್ಲಾ ಕಾರ್ಯಗಳ ಹಿಂದೆ ಇದ್ದು, ನಮ್ಮ ಮೇಲೆ ಪ್ರಭಾವಬೀರಿ, ನಮ್ಮಿಂದ ಕ್ರಿಯೆಗಳನ್ನು

ಆಗಮಾಡಿಸುವ, ಮೇಲೆ ತಿಳಿಸಿರುವ, ಅನೇಕ ಶಕ್ತಿಗಳಲ್ಲಿ ಒಂದೊಂದನ್ನೂ ಒಂದೊಂದು ಹೂಗಳೆಂದು ಭಾವಿಸಿ,

ಅವೆಲ್ಲವುಗಳ ಒಟ್ಟು ರೂಪವನ್ನು  ಒಂದು ಪುಷ್ಪಮಾಲೆಯೆಂದು ಪರಿಗಣಿಸೋಣ.  ಆ ಮಾಲೆಯೊಳಗಣ

ಎಲ್ಲ  ಶಕ್ತಿಗಳಿಗೂ ಪ್ರೇರಕವಾಗಿದ್ದು, ಅವೆಲ್ಲವನ್ನೂ ಒಟ್ಟಿಗೆ ಸೇರಿಸಿ, ನಮ್ಮ - ಅವುಗಳ ಸಂಭಂದವನ್ನು ರೂಪಿಸಿ,

“ಮಾಲೆಯೊಳಗಿನ ದಾರದಂತೆ, ನಮಗೆ ಕಾಣದಂತೆ, ಸುಳಿದಾಡುತ್ತಿರುವ ಮಹಾ ಶಕ್ತಿಯನ್ನು ಭಗವಂತ

ಎನ್ನಬಹುದು” ಎಂದು ಪೂಜ್ಯ ಡಿ ವಿ ಜಿ ಯವರು “ಜೀವನ ಧರ್ಮ ಯೋಗ” ದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.  


ಆ ‘ಭಗವಂತ’ ನೆಂಬ ತಿಳುವಳಿಕೆ ಅನೇಕ ಬುದ್ಧಿ, ಸ್ವಭಾವ, ಅಭಿರುಚಿ ಗಳಿಗೆ ತಕ್ಕಂತೆ ಅನೇಕರೀತಿಗಳಲ್ಲಿ

ವ್ಯಕ್ತವಾಗಿ ನಮ್ಮ ಆಧ್ಯಾತ್ಮ ಚಿಂತನೆ, ಸಂಪ್ರದಾಯಗಳನ್ನು ರೂಪಿಸಿ, ಆಯಾ ಚಿಂತನೆಗಳಿಗೆ ತಕ್ಕ ದೇವರು,

ದೇವಸ್ಥಾನ, ಪೂಜೆ, ಆಚರಣೆಗಳಿಗೆ ಎಡೆಮಾಡಿ ಕೊಟ್ಟಿದೆ. 


ನಾನು ಹುಟ್ಟಿದ, ಬೆಳೆದ, ಕಂಡ, ಮತ್ತು ಅರಿತುಕೊಳ್ಳಲು ಪ್ರಯತ್ನಿಸುತ್ತಿರುವ ಮಾಧ್ವ ಬ್ರಾಹ್ಮಣ

ಸಂಪ್ರದಾಯದ ತಿಳುವಳಿಕೆ, ನಂಬಿಕೆಯಂತೆ, ನಾನು ಮಾಡುವ ಎಲ್ಲ ಕಾರ್ಯಗಳ ಪ್ರೇರಕ ಶಕ್ತಿ,

ಅಥವಾ ‘ಭಗವಂತ’ನನ್ನು  ಶ್ರೀ ಹರಿ - ನಾರಾಯಣ ಎನ್ನುತ್ತೇವೆ. ಅದನ್ನು ಮೀರಿದ ಶಕ್ತಿ ಮತ್ತೊಂದಿಲ್ಲ

ಎಂದು ನಂಬುತ್ತೇವೆ. “ಹರಿ ಸರ್ವೋತ್ತಮ”. ಅವನಿಗೆ ಅಧೀನವಾದ, ಸದಾ ಅವನಿಚ್ಛೆಯಂತೆ

ನಡೆಯುವ, ಅವನ ಚಿಂತನೆ, ಸೇವೆ, ಉಪಾಸನೆಗಳಲ್ಲಿ ನಿರಂತರ ತೊಡಗಿರುವ  ‘ಮುಖ್ಯಪ್ರಾಣ’

ಅಥವಾ ‘ವಾಯುದೇವರು’ ಎನಿಸಿಕೊಳ್ಳುವ ಮತ್ತೊಂದು ಶಕ್ತಿ ಇದ್ದು, ಅದು ಶ್ರೀಹರಿಯ

ಇಚ್ಛೆಗನುಗುಣವಾಗಿ ನನ್ನ ಬುದ್ಧಿಯನ್ನು ಪ್ರಚೋದಿಸಿ ನನ್ನಿಂದ ಸರ್ವ ಕಾರ್ಯಗಳನ್ನು ಮಾಡಿಸುತ್ತದೆ

ಮತ್ತು ಅದರ ಪ್ರಭಾವ ಪ್ರತಿಕ್ಷಣವೂ ನನ್ನೊಡನೆ ಇರುತ್ತದೆಂದು ನಂಬುತ್ತೇವೆ. 


ನನ್ನ ಸಮಸ್ತ ಸಾಧನೆಗಳು ಶ್ರೀಹರಿ - ಪ್ರಾಣದೇವರ, ಪ್ರೇರಣೆ, ಶಕ್ತಿಯ ಮೂಲಕವೇ

ಸಾಧ್ಯವಾಯಿತೆಂದು ಕೊಳ್ಳುವುದು ನನ್ನ ಅಹಂಭಾವವನ್ನು ಕಡಿತಗೊಳಿಸಿ, ಸಾತ್ವಿಕತೆಯನ್ನು

ಪ್ರಚೋದಿಸುತ್ತದೆ. ಸಾತ್ವಿಕತೆ ಹೆಚ್ಚಾದಷ್ಟು ವ್ಯಕ್ತಿಗೆ, ಸಮಾಜಕ್ಕೆ ಒಳಿತೆಂಬುದು ಎಲ್ಲರಿಗೂ

ವೇದ್ಯವಾಗಿರುವ ವಿಷಯ. ಇಂಥ ನಮ್ಮ ಚಿಂತನೆಯ ಸಾರವನ್ನು ಶ್ರೀ ರಾಘವೇಂದ್ರ ತೀರ್ಥರು

ತಮ್ಮ “ಪ್ರಾತಃ ಸಂಕಲ್ಪ ಗದ್ಯ” ದಲ್ಲಿ ತಂದಿರಿಸಿದ್ದಾರೆ.  ಆ ಗದ್ಯದಿಂದ ಪ್ರೇರಿತವಾದ ಈ ಕೆಳಗಿನ

ಪದ್ಯ ಶುಭಕೃತ್ ನಾಮ ಸಂವತ್ಸರದ ಮೊದಲ ದಿನದಂದು ಹರಿ-ವಾಯುಗಳಿಗೆ, ಸಮರ್ಪಣೆ. 

ಶುಭಕೃತ್ ನಾಮ ಸಂವತ್ಸರವು  ತಮ್ಮೆಲ್ಲರಿಗೂ ಶುಭತರಲೆಂದು ಹಾರೈಕೆ. 



ಸಕಲ ಗುಣ ಪರಿಪೂರ್ಣ ರೂಪ 

ನಿನಗಿಲ್ಲ ದೋಷ, ಲೇಶ ಪಾಪ   

ಸರ್ವ ದೇಹಕಧಿಪತಿಯು ನೀನು 

ಸರ್ವ ದೇಶಕಧಿಪತಿಯು ನೀನು 


ಹಕ್ಕಿಯಿಂಚರ ನಿನ್ನ ನಾಮ  

ಸಿಂಹ ಘರ್ಜನೆ ನಿನ್ನ ನಾಮ  

ನಭದಿ ಗುಡುಗದು ನಿನ್ನ ನಾಮ  

ಶರಧಿ ಮೊರೆತವು ನಿನ್ನ ನಾಮ 


ಘಂಟೆಯಿನಿದನಿ ನಿನ್ನ ನಾಮ  

ಭೇರಿ ಮಾರ್ದನಿ ನಿನ್ನ ನಾಮ  

ಮಂತ್ರ ಘೋಷವು ನಿನ್ನ ನಾಮ  

ಸಾಮಗಾನವು  ನಿನ್ನ ನಾಮ 


ಎನ್ನ ಕಿವಿಗೆ ಬಿದ್ದೆಲ್ಲ ನಾದ 

ನಿನ್ನ ನಾಮವಾಗಿರೆ, ಶ್ರೀಪಾದ,

ನನಗಿನ್ನೇಕೆ ವೇದ, ವಾದ?

ರಘುನಂದನಗೆ ಸಾಕು, ನಿನ್ನ ಪಾದ. 




ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...