Wednesday 20 July 2022

ನನ್ನ ಗಾಯನ, ಮಂಗಟ್ಟೆಯ ಗಾಯನ !



ಶಾಲೆಯಲ್ಲಿ 

ವಾರ್ಷಿಕೋತ್ಸವಕ್ಕೆ 

ಪದ್ಯ ಹೇಳಲಿಕ್ಕೆ  

ನಡೆದಿತ್ತು ಆಯ್ಕೆ. 

ನಾ ಹಾಡಿದೆ

ಗೋವಿನ ಹಾಡು  

“ಗೊಗ್ಗರು ದನಿಯಪ್ಪಾ, 

ಬೇಡ” ಎಂದರು 

ನಮ್ಮ ಟೀಚರು 


ಗೆಳೆಯರ ಬಳಗದಲ್ಲಿ 

ಸಿನಿಮಾ ವಿಷಯದಲ್ಲಿ  

ಮಾತು ಮಸೆದಿದ್ದಾಗ

ಬಿತ್ತು ಬಾಯಿಂದ  

ಸಿನಿಮಾ ಹಾಡು.   

“ನೀನೇನಂದರೂ ಗುರು, 

ಕೇಳುತೀನಿ, ಆದರೂ  

ಹಾಡಬೇಡ ಮಾತ್ರ, ದೇವರು!” 

ಚಡ್ಡಿ ದೋಸ್ತನೆಂದ 

ಕಡ್ಡಿ ಮುರಿದಂತೆ  

 

ಮುಂಜಾನೆ, 

ಕಾಫಿಗಾಗಿ ಕಾಯುತ್ತಿದ್ದೆ 

ಸಂದೇಶಗಳ ನೋಡುತ್ತಿದ್ದೆ  

ಯಾರೋ ಹಾಕಿದ್ದರು  

ಒಂದು ಭಕ್ತಿ ಗೀತೆ. 

ಅರಿವಿಲ್ಲದೆಯೇ 

ನನ್ನ ಬಾಯಿಂದ ಹೊರಬಿತ್ತು 

ದಾಸರದೊಂದು ಮುತ್ತು.   

“ಬೆಳಗ್ಗೆದ್ದು ಏನು ಗಲಾಟೆ,

ಸಾಕು ನಿಮ್ಮ ಸಂಗೀತ” 

ನನ್ನ ಅರ್ಧಾಂಗಿ,

ಸೂಚಿಸಿದಳು ಸೌಮ್ಯವಾಗಿ, 

ತನ್ನ ಇಂಗಿತ ! 


ಮನೆಯ ಸುತ್ತಮುತ್ತ 

ಮರ ಗಿಡಗಳಲ್ಲಿ 

ಅಡಗಿರುತ್ತವೆ 

ಕೋಗಿಲೆ,ಗೋಪಿಹಕ್ಕಿ, 

ಮಂಗಟ್ಟೆ, ಮೀಂಚುಳ್ಳಿ. 

ಅನುದಿನದ ಶ್ರವಣ 

ಕೋಗಿಲೆ, ಗೋಪಿಹಕ್ಕಿಯ 

ಸುಮಧುರ ಗಾನ.  

ಜತೆಗೇ, 

ಮಂಗಟ್ಟೆ, ಮೀಂಚುಳ್ಳಿಯ

ಕರ್ಕಶ ತಾನ 


ಕೇಳಿಗೊತ್ತೆ ನಿಮಗೆ 

ಮಂಗಟ್ಟೆಯ ಗಾನ ? 

ಮಂಗಟ್ಟೆ  ತೆರೆದರೆ ಬಾಯಿ, 

ಇತರ ಪಕ್ಷಿಗಳೆಲ್ಲಾ ಸ್ಥಾಯಿ !! 

ಮಂಗಟ್ಟೆಗೆ ಗೊತ್ತೇ 

ತನ್ನ ದನಿಯ ತನಿ?

ಕಂಡಿತು ನೇಸರನ ಬನಿ  

ಮಂಗಟ್ಟೆ ಎತ್ತಿತು ದನಿ !   


ನನ್ನ ಎದೆಯೊಳಗೆ 

ಹುದುಗಿ ಕುಳಿತಿಹ 

ಮಂಗಟ್ಟೆ 

ಒಮ್ಮೊಮ್ಮೆ ಎಚ್ಚತ್ತು 

ಬಿಚ್ಚುತ್ತದೆ ಗಂಟಲು. 

ಹಕ್ಕಿ ಸ್ವಭಾವ, 

ಬೆಚ್ಚಬೇಕಿಲ್ಲ.  

ಕಚ್ಚುವುದಿಲ್ಲ !! 

 


Tuesday 12 July 2022

ಸಾಗಲಿ ಚಿತ್ತ ಹರಿಯತ್ತ !

 

ಮನುಷ್ಯ ಬುದ್ಧಿಗೆ ಅತೀತವಾದ, ದೇವರು ಅಥವಾ ಹಾಗೆ ಕರೆಸಿಕೊಳ್ಳುವ ಒಂದು ಶಕ್ತಿ, ಉಂಟೇ -

ಇಲ್ಲವೇ ಎಂಬುದು ಕಾಲಾನುಕಾಲದಿಂದ ವಿನಾಕಾರಣ ಚರ್ಚೆಗೊಳಗಾದ ಒಂದು ಪ್ರಶ್ನೆ. ನನಗೆ ತಿಳಿದ

ಮಟ್ಟಿಗೆ, ಅಂಥ ಶಕ್ತಿಯೊಂದು ಉಂಟೆಂದಾಗಲೀ ಇಲ್ಲವೆಂದಾಗಲೀ, ನಮ್ಮ ಬುದ್ಧಿಗೆ ನಿಲುಕುವಂಥ

ಪುರಾವೆಯ ಸಹಿತ ಸಮರ್ಥಿಸಿಕೊಳ್ಳುವುದು ಅಸಾಧ್ಯವಾದ ಕೆಲಸ. ಆದರೆ ನಾವು ಸುಮ್ಮನೆ

ಕೂಡುವವರಲ್ಲ. ಇದೆ - ಇಲ್ಲ ಎಂಬ ಎರಡೂ ಪಕ್ಷಗಳು ತಮ್ಮ ತಮ್ಮ ಸಮರ್ಥನೆಯ ವ್ಯರ್ಥ

ಪ್ರಯತ್ನ ಮುಂದುವರೆಸುತ್ತಲೇ ಇರುವವರು. 


ದೇವರಿಲ್ಲ ಎನ್ನುವವರ ಚಟುವಟಿಕೆ ಮೇಲೆ ತಿಳಿಸಿದ ಚರ್ಚೆಗಷ್ಟೇ ಸೀಮಿತವಾಯಿತು. ಅವರು ತಮ್ಮ

ಕಣ್ಣಿಗೆ ಕಾಣುವಷ್ಟನ್ನು ಮಾತ್ರ ನೋಡಿಕೊಂಡು, ತಮ್ಮ ಬುದ್ಧಿಗೆ ಸಿಕ್ಕಷ್ಟನ್ನು ತಿಳಿದುಕೊಂಡು ಕೂತರಾಯಿತು.

ದೇವರಿದ್ದಾನೆನ್ನುವವರ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ಎಲ್ಲಿದ್ದಾನೆ ? ಹೇಗಿದ್ದಾನೆ ?

ಅವನಿಗೂ/ಅವಳಿಗೂ /ಅದಕ್ಕೂ ನಮಗೂ ಸಂಬಂಧವೇನು? ಆ ಶಕ್ತಿಯ ಶಕ್ತಿ ಎಷ್ಟು? ಅದನ್ನು ಉಪಾಸಿಸುವ,

ಒಲಿಸಿಕೊಳ್ಳುವ ಬಗೆ ಹೇಗೆ ? ಇತ್ಯಾದಿ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಹತ್ತಾರು ತೆರನಾದ ಉತ್ತರಗಳು,

ವಿಶ್ಲೇಷಣೆಗಳು. 


ಆಯಿತು. ನಂಬಿಕೆ ಉಳ್ಳವರೆಲ್ಲರೂ ಆ ಬುದ್ಧಿಗೆ ನಿಲುಕದ ವಸ್ತುವನ್ನು ತಮ್ಮ ತಮ್ಮ ಬುದ್ಧಿ, ತಮ್ಮ ತಮ್ಮ

ಭ್ರಮೆಗಳಿಗೆ ತಕ್ಕಂತೆ ಅರಿತುಕೊಳ್ಳಲಿ, ನಂಬಿಕೊಳ್ಳಲಿ, ನಡೆದುಕೊಳ್ಳಲಿ ಎಂದು ಸುಮ್ಮನಿರುವಂತಿಲ್ಲ.

ನಮ್ಮ ತಿಳುವಳಿಕೆಯೇ ಸರಿ, ಮತ್ತೆಲ್ಲರೂ ತಪ್ಪು ಎಂಬ ಹಠ.  ಇರಲಿ, ಇದೆಲ್ಲಾ ಬಗೆ ಹರಿಯದ

ವಿಷಯಗಳು. 


ಇಲ್ಲಿ ಕೆಳಗೆ ಕಾಣಿಸಿರುವ, ನಾನು ಬರೆದ ಒಂದು ಪದ್ಯದ ಬಗ್ಗೆ ಕೊಂಚ ವಿವರಣೆ ಅಗತ್ಯ ಎನಿಸಿತು. ಅದಕ್ಕೆ

ಪೀಠಿಕೆಯಾಗಿ ಮೇಲಿರುವ ಬರಹ. ನಾನು ಜನ್ಮತಳೆದದ್ದು ಮಾಧ್ವ ಬ್ರಾಹ್ಮಣ ಸಂಸಾರದಲ್ಲಿ. ನನ್ನ ರೀತಿ, ನೀತಿ,

ಆಚರಣೆಗಳು ಮಾಧ್ವ ಸಂಪ್ರದಾಯವನ್ನು ಅನುಸರಿಸಿವೆ. ಆದರೆ ಮಾಧ್ವ ಸಿದ್ಧಾಂತದ ಬಗ್ಗೆ ನನಗೆ ಹೆಚ್ಚು

ತಿಳುವಳಿಕೆ ಇಲ್ಲ. ನನಗಿರುವ ಕೊಂಚ  ತಿಳುವಳಿಕೆಗೆ ಎಟುಕಿದಂತೆ -  ಒಂದು ಜೀವ, ಪರಮಾತ್ಮನ ಬಗ್ಗೆ

ಜ್ಞಾನ ಪಡೆಯಬೇಕಾದರೆ, ಆ ಜೀವಕ್ಕೆ ಇರಬೇಕಾದ ಪ್ರಜ್ಞೆ, ಜೀವದಿಂದ ಆಗಬೇಕಾದ ಸಾಧನೆ ಮತ್ತು ಅದಕ್ಕೆ

ಬೇಕಾದ ದೈವ ಸಹಾಯ ಇವುಗಳನ್ನು ಸೂಚಿಸುವ ಒಂದು ಪದ್ಯ ಇದು. ಮಧ್ವ ಸಿದ್ಧಾಂತದ ಅರಿವಿಲ್ಲದವರಿಗೆ

ಈ ಪದ್ಯದ ಭಾವ ಪೂರ್ತಿ ತಿಳಿಯದೇ ಇರಬಹುದು. ಅಡ್ಡಿಯಿಲ್ಲ. ತಿಳಿಯಬೇಕೆನ್ನುವವರು ಕೇಳಿದರೆ, ನನಗೆ

ತಿಳಿದದ್ದನ್ನು ತಿಳಿಸುತ್ತೇನೆ ! 


ಹರಿಯ ಅರಿವಾಗಲು ಬೇಕು ಸಿರಿಯ ನೆರವು

ಪೊರೆಯಬೇಕು ಗರುಡನ ಗರಿಯ ಹರಿವು

ಹರಿಯುತಿರಬೇಕು ಸದಾ ಹರಿಯತ್ತ ಚಿತ್ತ 

ಸಿರಿರಮಣ ನಿಗಮಕ್ಕೆ ನಿಲುಕದವನತ್ತ 


ಕರ್ಮ ಸಾಂಖ್ಯಗಳ ಮರ್ಮ ತಿಳಿಯಬೇಕು 

ಧರ್ಮ ಮಾರ್ಗದಿ ಕರ್ಮ ನಡೆಯಬೇಕು 

ನಿರ್ಮಮ ನಿಷ್ಕಾಮ ನೇಮವಿರಬೇಕು   

ದುರ್ಮತ ದುರ್ವಾದ ದೂರಸರಿಯಬೇಕು  


ಹರಿಯೆ ಸರ್ವೋತ್ತಮನೆಂದರಿಯಬೇಕು 

ಗುರುವರರಿಟ್ಟ ಮಾರ್ಗ ಗಮಿಸಬೇಕು  

ತಾರತಮ್ಯವ ತಿಳಿದು ಜ್ಞಾನಗಮ್ಯನ ಭಜಿಸಿ  

ಪಾರಮಾರ್ಥದ ಹಾದಿಯಲಿ ಸಾಗಬೇಕು 


ಗುಣ ಅಗಣಿತನ ಕಣಕಣದಿ ಕಾಣಬೇಕು 

ಗುಣಸತ್ವವದು ಎತ್ತರಕೆ ಏರಬೇಕು 

ಪ್ರಾಣದೇವನ ಪಾದ ಪಿಡಿಯಬೇಕು

ಗುಣಪರಿಪೂರ್ಣನೆಡೆಗೆ ಸಾಗಬೇಕು.    



ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...