Tuesday 20 February 2024

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು. 



ಬೆಳಗಿನ ಮೊದಲ ಮೆಟ್ರೋ 

ಬದಿಯಲ್ಲಿ ಭೋರಯಿಸುವಹೊತ್ತಿಗೆ 

ಮೈಮುರಿದೇಳುತ್ತದೆ 

ನಮ್ಮ ಬಹುಮಹಡಿ ಕಟ್ಟಡ 


ನಿದ್ದೆಬಾರದೆ ಹೊರಳಾಡಿ ಎದ್ದ 

ಮೊದಲ ಮುದಿತಲೆ 

ಕೈಕಾಲಾಡಿಸಲೆಂದು 

ಹೊರಬೀಳುವ ಹೊತ್ತಿಗೆ 


ಒಳಹೊಕ್ಕು ಕಟ್ಟಡಕ್ಕೆ 

ಪ್ರದಕ್ಷಿಣೆ ಹಾಕುತ್ತಾರೆ 

ಹಾಲಿನವರು, ಪತ್ರಿಕೆಯವರು 

ಅಗಸನ ಕತ್ತೆಯಂತೆ ಕಾಣುವ 

ತಮ್ಮ ದ್ವಿಚಕ್ರಿಯಲ್ಲಿ 


ಕೆಲವೇ ಕ್ಷಣಗಳಲ್ಲಿ 

ಇನ್ನೊಂದೆರಡು, ನಾಕು 

ಹಿರಿತಲೆಗಳು ಹೊರಬೀಳುತ್ತವೆ 

ನಿಧಾನವಾಗಿ ಎರಡು ಸುತ್ತುಬರುತ್ತವೆ 

ಅಂಚಿನಲ್ಲಿರುವ ಹೂಗಿಡಗಳಿಂದ 

ಎರಡೇ ಎರಡು ಹೂ ಹಿರಿದು 

ವಾಪಸಾಗುತ್ತವೆ 


ತಮ್ಮ ಪ್ರೀತಿಯ ಶ್ವಾನಗಳ 

ಪಟ್ಟಿಹಿಡಿದು ಹೊರಬರುತ್ತಾರೆ 

ಶ್ವಾನಪ್ರಿಯರು.  

ಗೇಟಿನಿಂದಾಚೆ ಹೋಗಿ, 

ಸುತ್ತಲಿನ ಊರು ಗಲೀಜುಮಾಡಿಸಿ 

ತಮ್ಮ ಕಟ್ಟಡ, ಮನೆಗಳ ಸ್ವಚ್ಛತೆ 

ಕಾಪಾಡಿಕೊಳ್ಳುತ್ತಾರೆ !


ಆ ಗಲೀಜು ಊರಿನಲ್ಲಿ ಬಾಳುತ್ತ, 

ಇವರ ಮನೆ ಸ್ವಚ್ಛಮಾಡುವ ಜನ  

ಒಳಬರುತ್ತಾರೆ, 

ಇವರ ಹಿಂದೆಯೇ.  


ಅರ್ಧನಿದ್ದೆಯ ಮುಖಗಳಿಗೆ 

ಆಹಾರ ತುರುಕುತ್ತಲೇ 

ಎಳೆದುಕೊಂಡು ನಡೆದು 

ಹಳದಿ ಗಾಡಿಯಲ್ಲಿ ತುರುಕಿ 

ಹಾಯಾಗುತ್ತಾರೆ 

ಎಳೆಯ ಅಪ್ಪ ಅಮ್ಮಂದಿರು 


ಇದೆಲ್ಲವನ್ನೂ ನೋಡುತ್ತಾ 

ನನ್ನ ಕಾಲೆಳೆಯುತ್ತಾ 

ಕೊಂಚಸಮಯದಲ್ಲೇ ಕಳೆದುಹೋಗುವ 

ಕೆಲವು ಹಕ್ಕಿಗಳ ಕಲರವ ಕೇಳುತ್ತಾ 

ಮತ್ತೊಂದು ಸುತ್ತು ಬೇಕೋ ಬೇಡವೋ 

ನಾ ಯೋಚಿಸುವಾಗ 


ಕಟ್ಟಡಗಳ ಸಂದಿಯಲ್ಲಿ  

ತಾ ಕಾಣಿಸಿಕೊಳ್ಳುತ್ತಾನೆ 

ಕೋಟಿ ಕೋಟಿ ವರುಷಗಳಿಂದ 

ಬೇಸರವಿಲ್ಲದೆ ಏಳು, ಬೀಳುತ್ತಿರುವ 

ಸೂರ್ಯದೇವ ! 




Tuesday 2 May 2023

ಮೂರುರಸ್ತೆ ಮತ್ತು ಮೂಷಕವಾಹನ

ಮೂರು ರಸ್ತೆ 

ಕೂಡುವೆಡೆಯೆಲ್ಲಾ  

ತಾನೂ ಕೂಡುತ್ತಾನೆ 

ನಮ್ಮ ಗಣಪ 


ಬಿಸಿಲಿಗೆ ಬೇಯುತ್ತಾ 

ಚಳಿಗೆ ನಡುಗುತ್ತಾ 

ಮಳೆಯಲ್ಲಿ ನೆನೆಯುತ್ತಾ 

ರಸ್ತೆ ಧೂಳು ಕುಡಿಯುತ್ತಾ 


ಕೆಲವರು   

ಇರಿಸುತ್ತಾರೆ ಇವನನ್ನು

ಚಂದದ ಮಂದಿರಕಟ್ಟಿ 

ಕೆಲವರು ಕೂರಿಸಿರುತ್ತಾರೆ  

ಹಾಗೆಯೇ ಬೇಕಾಬಿಟ್ಟಿ  


ಬಳಿಯಲ್ಲಿ ಸುಳಿವವರು 

ನಿಲ್ಲುತ್ತಾರೆ ಅರೆಕ್ಷಣ

ಚಪ್ಪಲಿ ಬಿಚ್ಚಿ 

ಕಣ್ಣು ಮುಚ್ಚಿ 

ಹಣೆಗೆ ಕೈ ಹಚ್ಚಿ 


ನೆಗೆದು ನಡೆಯುತ್ತಾರೆ 

ಮರುಕ್ಷಣ 

ಹಿಂದಿನಿಂದ ಬಂದ

ರಿಕ್ಷಾ ಸದ್ದಿಗೆ ಬೆಚ್ಚಿ !


ನಮ್ಮ ಮನೆಯಿತ್ತು 

ಮೂರುರಸ್ತೆ ಕೂಡುವೆಡೆ 

ಆದರೆ ಮನೆ ಮುಂದೆ 

ಗಣಪನಿರಲಿಲ್ಲ  


ಅದೇಕೆಂದು ಅಪ್ಪನ 

ಕೇಳೋಣವೆಂದರೆ 

ಈಗ ಅಪ್ಪನೇ ಇಲ್ಲ 


ಮುಂದೆಯೂ ಗಣಪ 

ಅಲ್ಲಿ ಕೂಡುವುದಿಲ್ಲ 

ಏಕೆಂದರೆ ಅಲ್ಲಿ   

ಒಳಗೆ ಕುಳಿತಿದ್ದಾನಲ್ಲ  


ಯಾ ಅಲ್ಲಾ !!



Thursday 26 January 2023

ಕಾಲಾಯ ತಸ್ಮೈ ನಮಃ!

ಸುಖ ಸಂಸಾರಿ ಶಿವ 

ಹಾವಿನ ಹಾಸಿಗೆಯ 

ಶೇಷ ಶಯನ 

ಎಲ್ಲರ ಅಪ್ಪ, ತಿಮ್ಮಪ್ಪ 


ಹುಲಿ ಸವಾರಿಯ 

ಮಲೆ ಮಹಾದೇವ 

ಕರುಳಹಾರದ 

ಉಗ್ರ ನರಸಿಂಹ


ಬೆಟ್ಟ ಹೊತ್ತ ಕೃಷ್ಣ 

ಬೆಣ್ಣೆ ಕದ್ದ ಕೃಷ್ಣ  

ಗೀತಾ ಬೋಧಕ ಕೃಷ್ಣ

ಕಾಳಿಂಗ ಮರ್ದನ ಕೃಷ್ಣ 

  

ಬನಶಂಕರಿ, ಚೌಡೇಶ್ವರಿ, 

ಹನುಮಾನ, ಗಜಾನನ  

ಶಾಕಾಂಬರಿ,ರಕ್ತಾಂಬರೀ

ಪೀತಾಂಬರ ಧಾರಿಗಳು 


ನಮ್ಮ ಮನೆಗಳ 

ಗೋಡೆಗಳಲ್ಲಿ 

ಮಾಡ,ಗೂಡುಗಳಲ್ಲಿ 

ದೇವರ ಕೋಣೆಗಳಲ್ಲಿ,  


ಹೂ ಹಾರ, ಮಣಿ ಹಾರ 

ಮತ್ತಿತರ ಅಲಂಕಾರ 

ಅಗರಬತ್ತಿ, ಆರತಿ 

ಸಪ್ರೀತಿ ಸನ್ಮಾನದಿಂದ


ಕಾಲ ಕಳೆಯುತ್ತಿದ್ದರು  

ಬಲುಸುಖದಿಂದ. 


ವರುಷಗಳು ಸರಿದು 

ಪಟಗಳು ಹರಿದು 

ಕಟ್ಟುಮುರಿದೋ    

ಬಣ್ಣಗೆಟ್ಟೋ  


ತೆಪ್ಪಗಿರಿಸಲುಬೇಡ  

ತಿಪ್ಪೆಗೆಸೆಯಲುಬೇಡವಾಗಿ 

  

ಕಳಿಸಿದ್ದೇವೆ ಅವರನ್ನೂ, 

ಫುಟಪಾತ್ ಪಕ್ಕದ 

ಪಾರ್ಕಿನ ಕಟಕಟೆಯ  

ಆಸರೆಯ ಆಶ್ರಮಕ್ಕೆ !


ಕೈಲಾಸವಾಸಿಯಾದರೂ 

ಕಾಲಾಯ ತಸ್ಮೈ ನಮಃ!




Sunday 4 December 2022

ಬಾಗಿಲ ಮುಂದಿನ ಬಳ್ಳಿ






ಎಂಥ ಸುಂದರ ಹೂಗಳು 

ಅದೆಂಥ ಸುಂದರ ಬಳ್ಳಿ 

ಪುಷ್ಪ ತೋರಣವಾಯಿತಲ್ಲ !

ಸಿಕ್ಕಿತೆಲ್ಲಿ ಇದು ನಿಮಗೆ ?


ಇದೇನು ಗಿಡ ನೇತಾಡುತ್ತ ಇಲ್ಲಿ ?

ತಾಗುತ್ತ ತಲೆಗೆ ಹಿಂದು ಮುಂದಿನಲ್ಲಿ  

ಕಣ್ಣಿಗೂ ತಗುಲಿಸಿಕೊಂಡು ಬಂದೆ 

ತೆಗೆಸಿಬಿಡಿ ಇಂದೇ.  


ನನ್ನ ಬಾಗಿಲ ಮುಂದಿನಲ್ಲಿ  

ನೇತಾಡುತ್ತಿದೆ ಈ ಹೂ ಬಳ್ಳಿ 

ನಮ್ಮಲ್ಲಿಗೆ ಬಂದವರಿಬ್ಬರು

ತೋರಿದ ಎರಡುಮಾತನಂದರು.   


ಜಗವ ಮೆಚ್ಚಿಸುವುದುಂಟೆ ಎಂದಾದರೂ? 


Monday 26 September 2022

ದಸರಾ ಗೊಂಬೆ

ನಮ್ಮ ಚಿಕ್ಕಂದಿನಲ್ಲಿ ದಸರಾಹಬ್ಬಕ್ಕೆ ಶಾಲೆಗೆ ರಜೆ. ಅದಕ್ಕೆ ಮುಂಚೆ ಮುಂಚೆ ನಾವು ‘ಚಿಕ್ಕ ಪರೀಕ್ಷೆ’

ಎಂದು ಕರೆಯುತ್ತಿದ್ದ ಮಧ್ಯಕಾಲೀನ ಪರೀಕ್ಷೆ ಮುಗಿದಿರುತ್ತಿತ್ತು. ಹಾಗಾಗಿ ದಸರಾರಜೆಯಲ್ಲಿ ವಿದ್ಯಾಭ್ಯಾಸಕ್ಕೂ ರಜೆ. 


ದಸರಾ ಎಂದಕೂಡಲೇ ಹಬ್ಬಕ್ಕೆ ಬೊಂಬೆಗಳನ್ನು ಜೋಡಿಸುವ ಖುಷಿ ನಮಗೆ. ಮನೆಯಲ್ಲಿದ್ದ ಮೇಜು,

ಬೆಂಚು, ಟೀಪಾಯಿ ಎಲ್ಲವನ್ನೂ ಜೋಡಿಸಿ ಎರಡು - ಮೂರು  ಮೆಟ್ಟಲುಗಳನ್ನಾಗಿ ಮಾಡಿ,

ಅದರಮೇಲೊಂದು ವಸ್ತ್ರಹಾಸಿ, ಮಧ್ಯದಲ್ಲಿ ಪಟ್ಟದ ಗೊಂಬೆಗಳನ್ನಿಟ್ಟು ಅದರ ಸುತ್ತ ಮನೆಯಲ್ಲಿರುತ್ತಿದ್ದ

ಎಲ್ಲ ಗೊಂಬೆಗಳು ಮತ್ತು ಆಟದಸಾಮಾನುಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದೆವು. ನಂತರ

ಸರಸ್ವತೀಪೂಜೆಯದಿವಸ ಸರಸ್ವತಿಯ ವಿಗ್ರಹ, ಆಯುಧಪೂಜೆಗೆ ಚಾಕು, ಕತ್ತರಿ, ಮಚ್ಚು, ಸ್ಕ್ರೂ ಡ್ರೈವರ್,

ಎಲ್ಲಕ್ಕೂ ಜಾಗಮಾಡಿ ಇಡುವ, ಪೂಜಿಸುವ, ಸಂಭ್ರಮವೇ ಸಂಭ್ರಮ.  ಹತ್ತುದಿನದ ಚಟುವಟಿಕೆಯ

ನಂತರ ಅದೆಲ್ಲವನ್ನೂ ತೆಗೆದು ಪೆಟ್ಟಿಗೆಗೆ ಸೇರಿಸಿ, ಶಾಲೆಯ ಚೀಲ ಹುಡುಕಿ, ಪುಸ್ತಕ ಜೋಡಿಸಿಕೊಂಡು,

ಜೋಲುಮುಖದಿಂದ ಮತ್ತೆ ಶಾಲೆಯಕಡೆ ನಡೆಯುವುದು.  


ನಾನು ಬೆಳೆದಂತೆ ಅನೇಕ ವರುಷಗಳ ಕಾಲ ಎಲ್ಲ ಮನೆಗಳಲ್ಲೂ ದಸರೆಯ ಸಂಭ್ರಮ ಬಹಳವೇ

ಇಳಿಮುಖವಾಗಿ ಹೋಗಿತ್ತು. ಗೊಂಬೆಗಳ ಪ್ರದರ್ಶನ ನಿಂತೇಹೋಗಿ, ಪೂಜೆಗೋಸ್ಕರ ಎರಡು ಪಟ್ಟದ

ಗೊಂಬೆಗಳು ಹಾಗೂ ಸರಸ್ವತಿಯ ವಿಗ್ರಹ ಮಾತ್ರ ಒಂದು ಮೇಜಿನಮೇಲೆ ಕಾಣುತ್ತಿದ್ದವು. 


ಈಗ ಕೆಲವು ವರುಷಗಳಿಂದ ಮತ್ತೆ ದಸರಾಗೊಂಬೆಗಳನ್ನು ಕೊಳ್ಳುವುದು, ವಿಧ ವಿಧವಾಗಿ ಅಲಂಕರಿಸಿ

ಜೋಡಿಸಿ ಪ್ರದರ್ಶನ ಮಾಡುವುದು ಮುಂತಾದ ಚಟುವಟಿಕೆಗಳು ಕಾಣಬರುತ್ತಿವೆ. ಈ ನಮ್ಮ

ಸಂಪ್ರದಾಯ ಮತ್ತೆ ಉತ್ತೇಜಿತವಾಗಿ ಮನೆಮನೆಗಳಲ್ಲೂ ಕಾಣುತ್ತಿರುವುದು ನನಗೆ ಬಹಳ ಸಂತೋಷದ

ವಿಷಯ. ಅದರೊಂದಿಗೆ  ದಸರಾ ಹತ್ತಿರಬಂದಂತೆ ಅಂಗಡಿಗಳಲ್ಲಿ, ರಸ್ತೆಪಕ್ಕಗಳಲ್ಲಿ, ಗೊಂಬೆಗಳ

ಮಾರಾಟದ ಬಿರುಸು ಸಹ ಕಾಣುತ್ತಿದೆ. ಮೊನ್ನೆ ಹಾಗೆಯೇ ಒಂದು ಅಂಗಡಿಯಲ್ಲಿ ಮಾರಾಟಕ್ಕಿದ್ದ

ಗೊಂಬೆಗಳನ್ನು ಕಂಡಾಗ ಮನದಲ್ಲಿ ಮೂಡಿತು ಕೆಳಗಿನ ಪದ್ಯ.  


ಗೊಂಬೆಯಂಗಡಿಯಲ್ಲಿ ಕಂಡಿತು 

ದಸರಾಗೊಂಬೆ ಪ್ರದರ್ಶನ

ನೆಲದಿಂದ ಸೂರಿನವರೆಗೆ 

ಗೊಂಬೆಗಳ ಸೋಪಾನ 


ರಾಮ ಆಂಜನೇಯರ 

ಪ್ರೀತಿಪೂರ್ವಕ ಆಲಿಂಗನ 

ನೋಡುವನು ಶೇಷತಲ್ಪದಲೊರಗಿ

ಅನಂತಶಯನ


ಪಕ್ಕದಲ್ಲೆ ಬಾಲ ಕೃಷ್ಣನ 

ಕಾಳಿಂಗ ಮರ್ದನ 

ಈ ಪಕ್ಕ ಭಾರ್ಯೆ ನಡೆಸಿಹಳು  

ಮಹಿಷಾಸುರ ಮರ್ದನ


ಮೇಲೆ ಶ್ವೇತಧಾರಿಣಿ 

ಸರಸತಿಯ ವೀಣಾವಾದನ

ಆಲಿಸುತ್ತ ಮೈಮರೆತಿಹನು  

ರಾಮಬಂಟ ಹನುಮಾನ


ಕೆಳಗೆ ಸಾಲಿನಲ್ಲಿ ನಡೆದಿದೆ 

ಭೂಸುರರ ಭೂರಿಭೋಜನ

ಅದಕೆ ವೀಕ್ಷಕ ನಮ್ಮ 

ಗಣಪ, ಮೂಷಿಕ ವಾಹನ


ಅತ್ತ ನೋಡಿದರೆ, ಅವನಪ್ಪ 

ಶಿವ, ಧ್ಯಾನಮಗ್ನ 

ಇತ್ತ ಕಮಲನೇತ್ರನ ನಾಭಿಯಲಿ 

ಶಿವನ ಅಪ್ಪನ ಜನನ ! 


ಕೊಳುವವರ ಕಿಸೆಯೆಡೆಗೆ 

ಮಾರುವವರ ಗಮನ 

ನಾಡಹಬ್ಬದ ಸಂಭ್ರಮ 

ನಾಡಿಗೆ ನಿತ್ಯನೂತನ !  


ತಮ್ಮೆಲ್ಲರಿಗೂ ನಾಡಹಬ್ಬದ ಶುಭಾಶಯಗಳು 


Sunday 28 August 2022

ಮಳೆಯ ಮುಂಜಾನೆ and ಗೌರಿ ಹಬ್ಬ




ಐದಕ್ಕೆ ನಿದ್ದೆ ಹರಿಯಿತು, ಎದ್ದೆ 

ಹೊರಗೆ ನೆಲ, ಗಿಡ, ಗೋಡೆ ಎಲ್ಲ ಒದ್ದೆ 


ಮಳೆ ನಿಂತಿತೋ, ಇಲ್ಲವೋ ಜಿಜ್ಞಾಸೆ 

ಛತ್ರಿ ಹಿಡಿದು ಹೋಗಬಹುದೇನೋ? ಆಸೆ 


ಫ್ಲೈ ಓವರ್ ನ ಬದಿಗೆ ದೋಸೆಮಾರುವವ 

ದೋಸೆಮಾರಿದ ಫ್ಲೈ ಓವರ್ ನ ಕೆಳಗೆ ನಿಂದು

ದೋಸೆ ತಿನ್ನುವವರು, ಅವರ ಸ್ಕೂಟರು ಕಾರುಗಳು ತುಂಬಿ 

ನನ್ನ ರಸ್ತೆಯಾಯಿತು ಬಂದು !  


ಪಾರ್ಕಿನಲ್ಲಿ ದೀಪಗಳಿಗೆ ರಜೆ 

ಕತ್ತಲಲ್ಲಿ ಜಾರಿಬಿದ್ದರೆ ತಿಂಗಳ ಕಾಲ ಸಜೆ 


ನೀರಿನ ಭಾರಕ್ಕೆ ವಾಲಿದ ಕೊಂಬೆಗಳಡಿ 

ನಿಧಾನಕ್ಕೆ ನಡೆದೆ 

ಶಿವ ಲಿಂಗದ ಮೇಲೆ ತೊಟ್ಟು ತೊಟ್ಟೆಂದು ಬೀಳುವ 

ಅಭೀಶೇಕದ ಅನುಭವ ಪಡೆದೆ 

 

ಕೊಂಚಹೊತ್ತಿಗೆ ಬೆಳಕಾದಾಗ ಪಶ್ಚಿಮದಿಗಂತದಲ್ಲಿ 

ಗುಂಪು ಗುಂಪು ಬಿಳಿ ಮೋಡಸಾಲು 

ಸಮುದ್ರತೀರದಲ್ಲಿ ಒಂದರಮೇಲೊಂದು ಏರಿ ಬರುವ 

ಅಲೆಗಳದೇ ಚಾಲು 

ಕೆಲವೇ ಕ್ಷಣಗಳಲ್ಲಿ ಪೂರ್ವದಲ್ಲಿ ಸೂರ್ಯನ ಇಣುಕು 

ಸುತ್ತಲಿನ ಗಿಡ, ಮರ, ಗೋಡೆಗಳಮೇಲೆಲ್ಲಾ 

ಬಂಗಾರದ ಬೆಳಕು !





ಗೌರಿ ಹಬ್ಬ 




ನಮ್ಮ ಓದುವ ಮೇಜನ್ನು 

ತಲೆಕೆಳಗು ಮಾಡಿದರೆ 

ಅದರ ನಾಲ್ಕು ಕಾಲಾಯಿತು 

ನಾಲ್ಕು ಕಂಭ 


ಮುಂದಿನ ಎರಡು ಕಾಲಿಗೆ 

ಕಟ್ಟಿದೆವು 

ಬಾಳೆ ಕಂಭ 


ಮೇಲೆ ತೋರಣ ಕಟ್ಟಿ 

ಮಧ್ಯದಲ್ಲಿ ಕುಳ್ಳಿರಿಸಿದೆವು 

ಸ್ವರ್ಣ ಗೌರಿಯ ಬಿಂಬ 


ಅರಿಸಿನ ಕುಂಕುಮ 

ಹೊಳೆವ ವರ್ತಿ ವಸ್ತ್ರ,

ಮಲ್ಲಿಗೆ, ಸೇವಂತಿಗೆ, 

ಮುಂದೆ ತಟ್ಟೆ ತುಂಬ. 


ಕೆಂಪು ಹಸಿರು ಬಳೆಗಳು 

ರೇಷ್ಮೆ ಸೀರೆಯುಟ್ಟು 

ಪೂಜೆಗೆ ಕುಳಿತ 

ಅಮ್ಮನ ಕೈತುಂಬ 


ಪೂಜೆ ಮುಗಿದಂತೆ 

ಒರಳು, ಒನಕೆ 

ಕಾವಲಿ, ಡಬರಿ 

ಸೌಟು ಸಟ್ಟುಗದ ಸದ್ದು 

ಅಡಿಗೆಯ ಮನೆತುಂಬ 


ಘಮ್ಮನೆ ಬೇಯುವ 

ಹೋಳಿಗೆಯ ಸುವಾಸನೆ 

ನಮ್ಮ ಮೂಗಿನ ತುಂಬ 


ಅಡಿಗೆ ಯಾದೊಡನೆ 

ನೈವೇದ್ಯ ತೋರಿಸಿ 

ಉಂಡರೆ ಹೊಟ್ಟೆ ತುಂಬಾ 


ಎಲ್ಲಿ ಕುಳಿತರಲ್ಲೇ 

ತೂಕಡಿಸಿ ಜೊಂಪು 

ಕಣ್ಣ ತುಂಬ


ನಮ್ಮ ಚಿಕ್ಕಂದಿನ 

ಭಾದ್ರಪದ ತದಿಗೆಯ 

ಚಿತ್ರ, ಮುದ,

ಈಗಲೂ ಮನದ ತುಂಬ!

Saturday 13 August 2022

ಬಾಯಲಿ ಹರಿನಾಮ, ಹೃದಯದಿ ಶ್ರೀರಾಮ .....


ಮಂತ್ರಾಲಯ ಪ್ರಭುಗಳು, ರಾಘವೇಂದ್ರಸ್ವಾಮಿಗಳು, ಗುರುರಾಯರು, ಅಥವಾ ಬರಿದೇ

‘ರಾಯ’ರೆಂದರೂ ‘ಓ’ಗೊಡುವ ಶ್ರೀ ರಾಘವೇಂದ್ರ ತೀರ್ಥರನ್ನುದ್ದೇಶಿಸಿ ನಾನು ಬರೆದ ಒಂದು

ಗೀತೆ ಇದು. ಲೋಕಾರೂಢಿಯಲ್ಲಿ, ‘ನಾನು ಬರೆದೆ’ ಎಂದರೆ, ಕೇಳಿದವರು  ಒಪ್ಪಿಯಾರು.

ಆದರೆ ರಾಯರು ಇದನ್ನು ಸರ್ವಥಾ ಒಪ್ಪಲಾರರು. ಅವರು ಒಪ್ಪಬೇಕಾದರೆ ಮೇಲಿನ

ವಾಕ್ಯವನ್ನು “ದೇಶಕಾಲಾಧಿಪತಿ, ದೇಹೇಂದ್ರಿಯಾಧಿಪತಿ ಶ್ರೀ ರಾಮಚಂದ್ರ ದೇವರ

ಪ್ರೇರಣೆ ಹಾಗೂ ಆಜ್ಞೆ ಯಂತೆ ಶ್ರೀ ಮುಖ್ಯಪ್ರಾಣದೇವರು ಕೃಪೆಮಾಡಿ ನನ್ನೊಳಗಿದ್ದು

ನನ್ನಿಂದ ಬರೆಸಿದ ಗೀತೆ” ಎಂದೇ ಬರೆಯಬೇಕು !  ಆದ್ದರಿಂದ, ಪ್ರಾಣದೇವರು ನನ್ನಿಂದ ಬರೆಸಿ,

ಹಾಡಿಸಿದ ಗೀತೆ ಇದು. ರಾಯರ ಆರಾಧನೆಯ ಸಂಧರ್ಭದಲ್ಲಿ, ಶ್ರೀ ರಾಘವೇಂದ್ರ

ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ

ಸ್ವಾಮಿಯ ಪ್ರೀತ್ಯರ್ಥವಾಗಿ. 


ಬಾಯಲಿ ಹರಿನಾಮ ಹೃದಯದಿ ಶ್ರೀರಾಮ 

ಶಿರದಲಿ ಪೂರ್ಣಬೋಧ ವಿಚಾರಧಾಮ   


ಕರದಲಿ ದಂಡ ಕಮಂಡಲ ಮಾಲ 

ಕರಕಮಲಾರ್ಚಿತ ಕೌಸಲ್ಯಾ ಬಾಲ 

ಕರುಣೆಯ ಸೂಸುವ ಕೃಪಾಕಟಾಕ್ಷ 

ಕರಜೋಡಿಸೆ ಗುರು ಕಲ್ಪವೃಕ್ಷ 


ಸತ್ಯ ಧರ್ಮ ಸಚ್ಚಾರಿತ್ರ್ಯ ನೇಮ

ಸಂತತ ಜಪಿಸುತ ಶ್ರೀರಾಮನಾಮ 

ಸಚ್ಚಾಸ್ತ್ರ ಸಂಗೀತ ಕಲೆಯಲ್ಲಿ ಪ್ರೇಮ 

ಸದ್ಭಕ್ತರ ಸಂತತ ಪಾಲಿಪ ನಾಮ


ಭವ್ಯಾಕೃತಿ, ರಕ್ತಾಂಬರ ಧಾರಿ 

ಭಕ್ತರಿಗೆ ತೋರಿ ಹರಿಯತ್ತ ದಾರಿ 

ಭಕ್ತಿಭಾವ ನಿಂತಂತೆ ಮೈತಳೆದು 

ಭವಲೋಕವ ದಾಟಿಸೋ ಕೈಪಿಡಿದು 


ಅನುದಿನ ನೆರೆವುದು ಭಕ್ತ ಸಮೂಹ 

ಆರದು ನಿನ್ನಯ ಸೇವೆಯ ದಾಹ  

ತುಂಗಾತಟ ಮಂತ್ರಾಲಯವಾಸ 

ನಿನ್ನ ಚರಣ, ಎನ್ನ ಶಿರಕೆ ಆವಾಸ 





ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...