ಈಗೆರಡು ತಿಂಗಳ ಹಿಂದೆ ಜೂನ್ ತಿಂಗಳಲ್ಲಿ ಎರಡುವಾರಕಳೆದರೂ ಮಳೆಯ ಸುಳಿವು
ಕಾಣದಾದಾಗ ದಿಗಂತದಲ್ಲೆಲ್ಲಾದರೂ ಮೋಡಕಂಡೀತೇನೋ ಎಂದು ಕತ್ತು ಚಾಚಿನೋಡಿದೆವು.
ಜುಲೈ ಮೊದಲವಾರದಲ್ಲಿ ಶುರುವಾದಮಳೆ ನಿರಂತರ ಸುರಿಯತೊಡಗಿ, ನಿಲ್ಲುವ ಲಕ್ಷಣ ಕಾಣದಿರುವಾಗ,
ಎರಡು ಸೂರ್ಯನಕಿರಣ ಕಂಡರೆ ಅದೇನೋ ಸಂಭ್ರಮ ಎನಿಸುತ್ತಿದೆ. ನಾವಿರುವ ಗೋವಾದಲ್ಲಿ ಇದು
ಪ್ರತಿವರುಷದ ಗತಿಯಾದರೂ, ಈ ವರುಷ ಮಳೆ ಕೊಂಚ ಹೆಚ್ಚು ಸುರಿಯಹತ್ತಿದೆ. ಈ ನಮ್ಮ ಪರಿಸ್ಥಿತಿಯನ್ನು
ನೆನೆದಾಗ ಮನದಲ್ಲಿ ಮೂಡಿದಸಾಲುಗಳು.
ಚೈತ್ರ - ವೈಶಾಖ
ಬೇಸಗೆಯ ಬಿಸಿಲು ಬೀಗಿ
ಧರೆ ಕಾದು ಕಾವಲಿಯಾಗಿ
ಒಳಹೊರಗೆ ಧಗೆಯಾಗಿ
ತನು ಮನಗಳೆರಡೂ
ಹಪಹಪಿಸಿ ಕಾದವು ಮಳೆಗಾಗಿ
ನೀಲ ಗಗನದ ಕೊನೆಗೆ ಕರಿಮೋಡದ ಅಂಚು
ಅದರ ಮಧ್ಯದಲೊಂದು ಕುಣಿವ ಕೋಲ್ಮಿಂಚು
ಕಾದ ಮಣ್ಣಿನಮೇಲೆ ಹನಿ ಬಿದ್ದ ಸುವಾಸನೆ
ಹಾಯೆನಿಸಿ ಸುಳಿವ ತಂಗಾಳಿಯ ರವಾನೆ
ಜ್ಯೇಷ್ಠ - ಆಷಾಢ
ಸೂರಮೇಲಿನ ತಟಪಟ ಕಿವಿಗೆನಿಸಿತು ಇಂಪು
ಬದಲಾದ ಹವೆ ಎಂಥ ಆಹ್ಲಾದ, ತಂಪು
ಈ ಮಳೆಗಾಲ ಮಾಡಿತದೇನು ಮಾಯೆ?
ಎಲ್ಲೆಲ್ಲೂ ಕಂಗೊಳಿಸುವ ಹಸಿರ ಛಾಯೆ !
ಓತಪ್ರೋತ ಸುರಿವ ನೀರಿನ ಧಾರೆ
ಕರಿಮೋಡದಿ ಮುಚ್ಚಿಹೋಗಿದೆ ರವಿಯ ಮೋರೆ
ನೀರು ಹರಿದೆಡೆಯೆಲ್ಲಾ ಹಸಿರಪಾಚಿ
ಹರಡಿ ಕಾಳ್ಸೆಳೆಯುತಿದೆ ಎಲ್ಲೆಡೆ ಕೈಚಾಚಿ
ಅಂದು ಬಯಸಿ ಬೇಡಿದೆವು ಗಂಗಾವತರಣ
ಇಂದುಬೇಕೆನಿಸಿದೆ ಎರಡು ಸೂರ್ಯನ ಕಿರಣ
ಇದಲ್ಲವೇ ನಮ್ಮ ಈ ಜಗದ ಕೌತುಕ ?
ಅಂತೆಯೇ ತಿಳಿದವರೆಂದರು ಇದು ಮಾಯಾಲೋಕ !
No comments:
Post a Comment