Tuesday, 7 April 2020

ಗೋಪೀ ಹಕ್ಕಿ

ದೇಶಕ್ಕೆ ಬೀಗ ಬಿಗಿದಿದ್ದರೂ, ಮುಂಜಾನೆ ಬೆಳಕಾಗುವ ಮುಂಚೆ ಬೀಗ ಸಡಿಲಿಸಿ  ಅರ್ಧತಾಸು ವಾಯುಸಂಚಾರ
ಮಾಡಿಬಿಡುತ್ತೇನೆ. ನಮ್ಮ ಮನೆಯ ಸಮೀಪದಲ್ಲಿರುವ ಒಂದು ಸಣ್ಣ ತೊರೆಯ ಸುತ್ತಮುತ್ತ ಬೆಳೆದುಕೊಂಡು,
ಉಳಿದುಕೊಂಡಿರುವ ಮರಗಳಲ್ಲೊಂದರಲ್ಲಿ ‘ಮಲಬಾರ ವಿಸಿಲಿಂಗ್ ತ್ರಷ್’ ಎಂದು ಕರೆಸಿಕೊಳ್ಳುವ ಈ ಹಕ್ಕಿಯ
ಗಾನ ವರುಷಕ್ಕೊಮ್ಮೆ, ಕೆಲವುದಿನಗಳ ಕಾಲ, ತಪ್ಪದೆ ಕೇಳಿಬರುತ್ತದೆ. 
ನಾನು ಒಮ್ಮೆಯೂ ಆ ಜಾಗದಲ್ಲಿ ಅದನ್ನು ಕಂಡಿಲ್ಲ. ಆದರೆ ವರುಷಕ್ಕೊಮ್ಮೆ ಆ ಹಕ್ಕಿ ಕೂಗಿ, ತಾನಿನ್ನೂ
ಬದುಕಿದ್ದೇನೆಂದು ತಿಳಿಸಿದರೆ ನನ್ನ ಮನಸ್ಸಿಗೆ ಅದೇನೋ ಸಮಾಧಾನ. ಈ ವರುಷ ಸಮಯ ಮೀರಿದರೂ
ಅದರ ಕರೆ ಕೇಳಿಬರದೆ ಕೊಂಚ ಬೇಸರವಾಗಿತ್ತು. ಈ ಮುಂಜಾನೆ ಅದನ್ನು  ಕೇಳಿ ಬಹಳ ಸಂತೋಷವಾಯಿತು.
ಆ ಸಮಯದಲ್ಲಿ ಹೊಳೆದ ಕೆಲವು ಸಾಲುಗಳನ್ನು ಬೆಳಸಿ ಇಲ್ಲಿ ತಂದಿದ್ದೇನೆ. 
ಮುಂಜಾನೆಯ ನಿಶ್ಯಬ್ಧ ವಾತಾವರಣದಲ್ಲಿ, ಅದೆಲ್ಲೋ ಕೊಂಚ ದೂರದಲ್ಲಿ, ಗಿಡ ಮರಗಳ ಮಧ್ಯದಿಂದ
ತೂರಿಬರುವ ಆ ಗಾನ ಮನಸ್ಸಿಗೆ ಆಹ್ಲಾದಕಾರಕವೆನಿಸುತ್ತದೆ.
ಹಕ್ಕಿಯನ್ನು  ಕಂಡಿಲ್ಲದವರ ಅನುಕೂಲಕ್ಕೆಂದು ಅದರ ಚಿತ್ರವನ್ನು ಇಲ್ಲಿ ತಂದಿರಿಸಿದ್ದೇನೆ. 
ಗಾನ, ಚಿತ್ರ, ಅಂತರಜಾಲದಿಂದ ಪಡೆದುಕೊಂಡದ್ದು. 
ಸಾಲುಗಳು ನಾನು ಓದಿರುವ, ಮತ್ತು  ಆ ಮೂಲಕ ನನ್ನ ಮನದಲ್ಲಿ ಹೊಕ್ಕು ಹುದುಗಿರುವ ಅದೆಷ್ಟೋ
ಮಹಾನುಭಾವರ ಬರಹಗಳ ಪ್ರಭಾವ. 
ಬೆರಳಚ್ಚು ಮಾಡಿದವ ನಾನೆಂದು ಧೈರ್ಯವಾಗಿ ಹೇಳಬಲ್ಲೆ !





ಈ ಹಕ್ಕಿ ಕೂಗುವುದ ಕೇಳಿದೆ 
ಅರೆಗತ್ತಲಿನ ಬೆಳಗಿನಲ್ಲಿಂದು.   
ಅದೇನು ವಿಶೇಷ ಎನ್ನುವಿರೇನೋ ?
ವಿಶೇಷ ಹೀಗಿದೆ ನೋಡಿ. 
ಇದು ದಿನವಿಡೀ ಕೂಗುವುದಿಲ್ಲ,
ತ್ರ. 
ವರುಷವಿಡೀ  ಕೂಗುವುದಿಲ್ಲ,
ವಸಂತದಲ್ಲಿ ಮಾತ್ರ.
ಮತ್ತೆ, ನಾನದನು ಕಂಡಿಲ್ಲ
ಆಲಿಸಿದ್ದೇನೆ ಮಾತ್ರ !  

ನಿಜವೆಂದರೆ, ಇದು ಕೂಗುವುದಿಲ್ಲ,
ಕೋಗಿಲೆಯಂತೆ,
ಪದೇ ಪದೇ ಒಂದೇರಾಗದಲ್ಲಿ.  
ಈ ಹಕ್ಕಿ ಹಾಡುತ್ತದೆ,
ಸುಮಧುರವಾಗಿ, 
ಸರಾಗವಾಗಿ, ಸ್ಪಷ್ಟವಾಗಿ,
ಸಂಗೀತದಂತೆ !

ಮತ್ತಿದು 
ಎಲ್ಲೆಂದರಲ್ಲಿ ಅಲೆಯುತ್ತಾ 
ವಲಸೆಹೋಗುವುದಿಲ್ಲ.  
ವರುಷ ವರುಷಗಳ ಕಾಲ
ಇರುತ್ತದೆ ಇರುವೆಡೆಯೆಲ್ಲೇ.  
ಯಾರರಿವಿಗೂ ಬಾರದಂತೆ 
ಹಾರಾಡುತ್ತ, ಅಲ್ಲೇ 
ಸುತ್ತಮುತ್ತ.  

ವೈಶಾಖದ ಬಿಸಿಲು 
ವರ್ಷಕಾಲದ  ಮಳೆಯಂತೆ 
ವಸಂತದ ಈ ಗಾನ  
ಋತುಗಳ ತಾನ 
ಸರಿಯುಂಟೆಂಬ  ಭಾವನೆ 
ನೀಡುತ್ತದೆ ನನಗೆ.  
ಅದರಿಂದಲೇ, 
ಕಳವಳವಾಗಿತ್ತು ಮನಸಿಗೆ  
ಗಾನಕೇಳದೆ  ಈವರೆಗೆ.


ಹಾಡು ಕೇಳಿಬಂತು
ಇಂದು ಮುಂಜಾನೆ  
ಪ್ರತಿ ವಸಂತದಂತೆ 
ತಾನ  ತಪ್ಪದಂತೆ
ಕಿವಿಗಿಂಪೆನಿಸುವಂತೆ 
ಮನಹಗುರವಾಗುವಂತೆ  
ಎರಡು ಸಾಲು ಮೂಡುವಂತೆ !

ಬರೆದೆ ನೋಡಿ ಇಷ್ಟೆಲ್ಲಾ, 
ಆ ಹಕ್ಕಿಯ ಹೆಸರೇ 
ನನಗೆ ತಿಳಿದಿರಲಿಲ್ಲಾ !
ಅದು ಗೊತ್ತಾದದ್ದು ಇದೀಗ,  
ಗೂಗಲಿಸಿ ನೋಡಿದಾಗ !  
ಹೆಸರೂ ಸುಂದರ,
ಗಾನದಂತೆಯೇ ಮಧುರ !
ಗೋಪೀಹಕ್ಕಿ ಯಂತೆ !
ಕೃಷ್ಣನ ಕೊಳಲಿನ
ನೆನಪೇ ?!

No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...