ಸ್ನೇಹಿತರ ಮಧ್ಯೆ ಹರಟೆ ನಡೆದಿತ್ತು,
ಅಂತರ ಕಾಯ್ದುಕೊಂಡು
ಮೊಬೈಲ್ ಮೂಲಕ
ತಿಂಗಳಿಂದ ಕೆಲಸವಿಲ್ಲದೆ ಕುಳಿತೆವಲ್ಲ
ಯಾರೇನು ಮಾಡಿದಿರಯ್ಯಾ?
ಮನೆಯಲ್ಲಿ ಕೂತು,
ಚಿತ್ರ ಬರೆಯುತ್ತೇನೆ, ಒಬ್ಬನೆಂದ.
ನಮ್ಮ ಗುಂಪಿನ ಕಲಾವಿದ
“ಚಿತ್ರ ಬರೆಯುತ್ತೇನೆ,
ಮನದ ಭಿತ್ತಿಯಮೇಲೆ,
ಭಾವನೆಯ ಬಣ್ಣಹಚ್ಚಿ,
ಕಲ್ಪನೆಯ ಕುಂಚದಿಂದ”
ಎರಡನೆಯವ, ಕವಿಯಂತೆ
ನಮಗೆ ತಿಳಿಯದು ಅವನ ಮಾತು
ಹಾಡಲು ಕಲಿಯುತ್ತೇನಯ್ಯ
ಮೂರನೆಯವನೆಂದ
ಕಲಿಯಲಡ್ಡಿಯಿಲ್ಲ, ಕಲಿತದ್ದ ಕೇಳಿಸಿ
ನಮ್ಮ ಕೊಲಬೇಡ - ಕುಹಕಿಯೊಬ್ಬನಿಂದ
ಅಡಿಗೆ ಮಾಡಿದೆನೆಯ್ಯಾ ! ಹೆಡಿಗೆ ತುಂಬಾ
ನಾಲ್ಕನೆಯವ
ಉಂಡವರು ಬದುಕಿದ್ದಾರೇನಯ್ಯ?
ಐದನೆಯ ಮಿತ್ರ.
ಹೀಗೇ ನಡೆದಿದ್ದಾಗ ಒಬ್ಬನೆಂದ,
ನಿಮಗೆ ಆಶ್ಚರ್ಯ ವಾದೀತೇನೋ,
ಹೊಲಿಗೆ ಕಲಿಯುತ್ತಿದ್ದೇನೆ
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ,
ಒಮ್ಮೊಮ್ಮೆ ಸೊಟ್ಟಗಾಗಿ
ಕೆಟ್ಟೇ ಹೋಗುತ್ತದೆ.
ನಾನೂ ಅಷ್ಟೇ, ಅಕ್ಷರ ಜೋಡಿಸಿ
ಹೊಲಿಯಲು ಕಲಿಯುತ್ತಿದ್ದೇನೆ
ಅರ್ಥ ಬರುವಂತೆ
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ
ಒಮ್ಮೊಮ್ಮೆ ಕೆಟ್ಟೇ ಹೋಗುತ್ತದೆ !
No comments:
Post a Comment