ನಮ್ಮ ಅಂಗಳದಲ್ಲಿ ಅನೇಕ ಬಗೆಯ ಹೂಗಿಡಗಳು ಬೆಳೆದು, ಹೂಸುರಿದು, ಕೆಲಕಾಲ ಸೊಗಯಿಸಿ,
ಹಾಗೆಯೇ ಹುಳಹಿಡಿದು, ನಲುಗಿ, ಒಣಗಿ ಹೋಗಿವೆ. ಗುಲಾಬಿಗಳಿದ್ದವು. ಅನೇಕ ಬಣ್ಣ. ಕೆಲವುದಿನ ಚನ್ನಾಗಿ
ಬದುಕಿ ಹಾಗೇ ಬಾಡಿ ಹೋದವು. ಸುಂದರವಾದ ಬೆಟ್ಟ ತಾವರೆ, ಬಣ್ಣ ಬಣ್ಣದ ದಾಸವಾಳಗಳು ಬೆಳೆದು
ನಳನಳಿಸಿ, ಬುಟ್ಟಿ ತುಂಬಾ ಹೂಬಿಟ್ಟು ನಂತರ ಹುಳಬಿದ್ದು ಹಾಳಾದವು. ಮಲ್ಲಿಗೆ ಇನ್ನೂ ಉಂಟು. ಅದು
ಬೇಸಗೆಯಲ್ಲಿ ಮಾತ್ರ ಹೂಬಿಡುತ್ತದೆ. ಪಾರಿಜಾತ ಇದೆ. ಸಂಜೆವೇಳೆಗೆ ಅರಳತೊಡಗಿ ಸುಗಂಧ ಸೂಸುತ್ತದೆ,
ಮುಂಜಾನೆವೇಳೆಗೆ ನೆಲದಮೇಲೆ ಬಿದ್ದು ಗಿಡದಡಿ ಚಿತ್ತಾರ ಹಾಕುತ್ತದೆ, ತಾಸೆರಡುತಾಸಿನಲ್ಲಿ ಬಾಡಿಯೇ
ಹೋಗುತ್ತದೆ. ಮಳೆಯಿದ್ದರೆ ಹಾಳಾಗುತ್ತದೆ, ಚಳಿಯಿದ್ದರೆ ಅರಳುವುದಿಲ್ಲ !
ಆದರೆ ಈ ವಿಂಕ ಇದೆ ನೋಡಿ, ‘ವಿಂಕಾ ರೋಸಿಯ’ ಇದರ ಹೆಸರಂತೆ. ತಾನೇತಾನಾಗಿ ಬೆಳೆಯುತ್ತದೆ.
ಹರಡುತ್ತದೆ. ಮಳೆಯಲ್ಲೂ ಬದುಕುತ್ತದೆ, ಬಿಸಿಲಲ್ಲೂ ಬದುಕುತ್ತದೆ. ನಿತ್ಯ, ಗಿಡದಲ್ಲಿ ನಾಲ್ಕು ಹೂವಿರುತ್ತದೆ.
ಮೊನ್ನೆ ನಾಲ್ಕು ಸಸಿ ತೆಗೆದು ಬೇರೆಡೆ ಹಾಕಿದೆವು. ತಂಟೆಯಿಲ್ಲದೆ ಬೆಳೆಯುತ್ತಿದೆ. ಹೀಗೆ ಹಾಕಿದ ಹೊಸ ಸಸಿಯಲ್ಲಿ
ನಿನ್ನೆ ಹೂಕಂಡಾಗ ಮನದಲ್ಲಿ ಮೂಡಿದ ವಿಚಾರವನ್ನು ಪ್ರಾಸ ಕೊಟ್ಟು ಬರೆದಿದ್ದೇನಷ್ಟೆ. ಡಿವಿಜಿ ಯವರ ‘ವನಸುಮ’
ವನ್ನು ನೆನಸಿಕೊಳ್ಳುತ್ತಾ. ಈ ಹೂವಿಗೆ ಕನ್ನಡದಲ್ಲಿ ‘ಸದಾಪುಷ್ಪ’ ಎನ್ನುತ್ತಾರೆಂದು ಈಗತಾನೇ ಗೂಗಲ್
ಗುರೂಜಿಯವರು ತಿಳಿಸಿದರು. ಅನ್ವರ್ಥನಾಮ !
ಕೆಲವು ಹೂಗಳ ಹೆಗ್ಗಳಿಕೆ, ಘಮ ಘಮ ಸುಗಂಧ
ಕೆಲವದೇನು ಬಣ್ಣ, ರೂಪ, ನೋಡಲು ಬಲು ಚಂದ
ಕೆಲವ ಕಂಡರೆ ಭಗವಂತನಿಗೆ ಬಲು ಪ್ರೀತಿ
ಮತ್ತೆ ಕೆಲವ ಕಂಡರೆ ಸೂಸುತ್ತದಂತೆ ಪ್ರೀತಿ !
ಕೆಲವಕ್ಕೆ ಬೇಕೇಬೇಕು ಒಣ ಹವೆ ಮತ್ತು ಥಂಡಿ
ಕೆಲವಕ್ಕೆ ನೀರು ಮೊಗೆಮೊಗೆದು ಧಂಡಿ
ಕೆಲವು ಅರಳಲಾರವು ಕಾಣದಿದ್ದರೆ ಬಿಸಿಲು
ಮತ್ತೆ ಕೆಲವಕ್ಕೆ ಪಾಪ ಬಿಸಿಲೆಂದರೆ ದಿಗಿಲು
ಇಲ್ಲಿದೆ ನೋಡಿ ಇದಕ್ಕೆನ್ನುತ್ತಾರೆ ‘ವಿಂಕ’
ಕನ್ನಡದ ಹೆಸರ ನಾ ತಿಳಿದಿಲ್ಲ ಮಂಕ !
ಬಿಸುಟಿದಲ್ಲಿ ಬೆಳೆಯುತ್ತದೆ ಇದಕಿಲ್ಲ ಬಿಂಕ
ಮನೆಯ ಸುತ್ತಮುತ್ತೆಲ್ಲ ಇದರದೇ ಅಂಕ
ಘಮಿಸುವ ಗಂಧವಿಲ್ಲ, ಹೊಳೆಯುವ ಚಂದವಿಲ್ಲ
ಪೂಜೆಗೆ ಬರುವುದಲ್ಲ, ಪ್ರೀತಿ ಸೂಸುವುದಿಲ್ಲ
ನೀರು ಕೇಳುವುದಿಲ್ಲ ಬಿಸಿಲ ಗಣಿಸುವುದಿಲ್ಲ
ಎಲ್ಲಿಂದ ಕಿತ್ತು ಎಲ್ಲಿ ನೆಟ್ಟರೂ ಬೇಸರವಿಲ್ಲ
ಯಾವ ಹೆಗ್ಗಳಿಕೆಯಿಲ್ಲ, ಏನೂ ಬೇಡಿಕೆಯಿಲ್ಲ
ದಿನ ನಿತ್ಯ ನಾಲ್ಕು ಹೂವಿಗೆ ಮೋಸವಿಲ್ಲ !
ಸಿಕ್ಕಷ್ಟು ಪಡೆದು ತಕ್ಕಷ್ಟು ಕೊಡುವ ‘ವಿಂಕ’
ನಿನ್ನಂತೆ ನಾನಾದರೆ ಸಾಕು, ನಿಲ್ಲಿಸಲೇ ನನ್ನ ಶಂಖ ?
No comments:
Post a Comment