Wednesday, 8 July 2020

ವಲಸೆ ಕಾರ್ಮಿಕರು ಮತ್ತು ಕೈಕಾಲುಗಳು

ನನ್ನ ಸುತ್ತಮುತ್ತಲಿನ ಪರಿಸರದಲ್ಲಿ ಏನನ್ನಾದರೂ ಕಂಡಾಗ ಮನಸ್ಸಿಗೆ ಹೊಳೆದ ಪದವನ್ನೋ,
ಒಂದು ಸಾಲನ್ನೋ ಬೆಳಸಿ ಒಂದು ಪದ್ಯವನ್ನಾಗಿಸುವುದು ನನ್ನ ಅಭ್ಯಾಸ.  
ಅದನ್ನು ಬಿಟ್ಟು, ಯಾವುದಾದರೂ ಒಂದು ವಸ್ತುವನ್ನು ಉದ್ದೇಶಿಸಿ ಪ್ರಯತ್ನಪೂರ್ವಕವಾಗಿ ಒಂದು
ಪದ್ಯ ಬರೆಯ ಬೇಕೆನ್ನಿಸಿತು. 
ಇತ್ತೀಜೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ನಮ್ಮೆಲ್ಲರ ಮನಕಲಕಿ, ನಮ್ಮಲ್ಲಿ ಒಂದುರೀತಿಯ ತಪ್ಪಿತಸ್ಥ
ಭಾವನೆ ಉಂಟುಮಾಡಿದ ವಲಸೆಕಾರ್ಮಿಕರ ಬವಣೆಯನ್ನು ಕುರಿತು ಒಂದು ಪದ್ಯಬರೆಯುವ
ಪ್ರಯತ್ನದ ಪರಿಣಾಮ ಇಲ್ಲಿ ಕೆಳಗಿದೆ.   



ವಲಸೆ ಬಂದರು
ಕೆಲಸ ಹುಡುಕುತ್ತ 
ಸಾವಿರ ಮೈಲಿದೂರದ 
ತಮ್ಮ ಹಳ್ಳಿಗಳಿಂದ 
ಭೂತಾಕಾರದ 
ನಮ್ಮ ನಗರಗಳಿಗೆ  
ನಾವು ಮೈಬಗ್ಗಿಸದ 
ನಮ್ಮ ಕೆಲಸಗಳಿಗೆ 
ತಮ್ಮ ಕೈಕಾಲುಗಳನ್ನೊಡ್ಡಿ 

ನಮ್ಮ ಬಹುಮಹಡಿಗಳ ತುತ್ತ 
ತುದಿಗಳಿಂದ ತೂಗಾಡುತ್ತ 
ನಮ್ಮ ರಸ್ತೆಗಳ ಡಾಂಬರಿಗೆ 
ತಮ್ಮ ಬೆವರ ಸೇರಿಸುತ್ತ 
ನಮ್ಮ ಯಂತ್ರಗಳ ಬಾಯಿಗೆ  
ತಮ್ಮ ಕೈಕಾಲುಗಳ ಗಿಡಗುತ್ತಾ 
ಎಡೆ ಇರುವ ಎಲ್ಲೆಡೆಗಳಲ್ಲಿ 
ಮುರಿಯುತ್ತ ರೆಟ್ಟೆ 
ಹೊರೆಯುತ್ತ ಹೊಟ್ಟೆ 

ಮಾಸಿದ ಪ್ಯಾಂಟು ಷರಟು 
ರೀತಿ - ನೀತಿ ಕೊಂಚ ಒರಟು 
ಕೂದಲು ಬಿರುಸಾಗಿ ಕೆದರಿ 
ಅಗ್ಗದ ಮೊಬೈಲಿನಲಿ 
ಕನಸುಗಳು ಗರಿಗೆದರಿ 
ಹೊತ್ತ ಬೆನ್ನಮೇಲಿನ ಚೀಲ
ತುಂಬಿಕೊಂಡಿತ್ತು ಆಸ್ತಿಯನ್ನೆಲ್ಲ 

ಕೆಲಸ ನಡೆಯುವೆಡೆಯಲ್ಲಿ 
ರಸ್ತೆ ಕೂಡುವೆಡೆಯಲ್ಲಿ 
ಕೈಕಾಲುಗಳ ಮಾರುಕಟ್ಟೆಯಲ್ಲಿ
ನಿಲ್ಲುತ್ತಿದ್ದರು ಪ್ರತಿದಿನ
ಬದಿಯ ಚಾ ಬಂಡಿಯ  
ಮುರುಕು ಕಪ್ಪಿನಲ್ಲಿ  
ಚಾ ಕುಡಿಯುತ್ತ  
ಮೊಬೈಲಿನಲ್ಲಿ 
ಹಾಡು ಕೇಳುತ್ತ 
ಗುಟಕ ಅಗಿಯುತ್ತಾ 
ಉಗಿಯುತ್ತಾ 
ತಮ್ಮ ಕೈ ಕಾಲುಗಳ
ಕೊಳ್ಳುವರನ್ನು ಅರಸುತ್ತಾ

ಮಾರಾಟಕ್ಕಿಟ್ಟಿದ್ದ  
ಆ ಕೈಕಾಲುಗಳು 
ನಮಗೆ ಕಂಡದ್ದು, 
ಗಮನ ಸೆಳೆದದ್ದು, 
ತೀರಾ ಇತ್ತೀಚಿಗೆ, 
ಅವು ತಮ್ಮ ಗಂಟುಹೊತ್ತು 
ಸಾವಿರಮೈಲಿಯ ತಮ್ಮೂರಿನೆಡೆಗೆ 
ಕಾಲೆಳೆಯುತ್ತಾ ಹೊರಟಹೊತ್ತಿಗೆ 

ನಡೆಯುತ್ತಿದ್ದ
ಅದೆಷ್ಟೋ ಕಾಲುಗಳು 
ತಮ್ಮ ಊರ 
ಸೇರಲೇ ಇಲ್ಲವಂತೆ  
ಹಾಗೆಯೇ ಬಿದ್ದವಂತೆ
ಛಿದ್ರವಾಗಿ,  
ರಸ್ತೆಯಮೇಲೆ
ರೈಲು ಹಳಿಗಳ ಮೇಲೆ 

ಕಣ್ಣು ಕಾಣದೋ
ಎದೆ ನೋಡದೋ   
ತಿಳಿಯದಲ್ಲ, 
ಆ ಕೈಕಾಲುಗಳು 
ದೇಹಕ್ಕೆ ತಾಗಿಕೊಂಡಿದ್ದಾಗ 
ನಮಗೆ ಅವು 
ಕಾಣಲೇ ಇಲ್ಲ ! 





No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...