Wednesday, 19 January 2022

ಶ್ರೀಹರಿಯ ಚರಣ + ಕೃಷ್ಣಾ ಎನಬಾರದೇ

ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ

  

ಇಳೆಯನಳೆದು ನಭ ಮುಚ್ಚಿದ ಚರಣ 

ಹೆಡೆಯನೊಡೆದು ಕುಣಿದಾಡಿದ ಚರಣ 

ಶಿಲೆಯ ಮೆಟ್ಟಿ ವರ ಕೊಟ್ಟಂಥ ಚರಣ 

ಭಾಗೀರಥಿಯ ಭುವಿಗಿಳಿಸಿದ ಚರಣ 


ಕಪಟ ಶಕಟನ ಮುರಿದಿಟ್ಟಂಥ ಚರಣ 

ರಥಮೆಟ್ಟಿ ಅತಿರಥನ ಪೊರೆದಂಥ ಚರಣ 

ಸಖಿಯರೊಡೆ ಸರಸದಲಿ ವಿಹರಿಸಿದ ಚರಣ 

ರಘುನಂದನನ ಪೊರೆವ ರನ್ನದ ಚರಣ 


ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ






ಶ್ರೀ ಪುರಂದರದಾಸರ ಆರಾಧನೆಯಂದು ದಾಸವರೇಣ್ಯರ  ಕ್ಷಮೆಕೋರುತ್ತಾ.........  



ನರಜನ್ಮ ಬಂದಾಗ ನಾಲಿಗೆ ಇರುವಾಗ 

ಕೃಷ್ಣಾ ಎನಬಾರದೇ 

ಸರಸಿಜಾತನಪಿತನ ನೆನೆಯುತ್ತಲೊಮ್ಮೊಮ್ಮೆ 

ಕೃಷ್ಣಾ ಎನಬಾರದೇ


ವಾಟ್ಸಾಪ್ ಸಂದೇಶ ನೋಡಿ ಮುಂದೂಡುತ್ತ 

ಕೃಷ್ಣಾ ಎನಬಾರದೇ

ಫೇಸ್ಬುಕ್ ಗೀಸ್ಬುಕ್ ನಲ್ಲಿ ಮೆಚ್ಚುತ್ತ ಚುಚ್ಚುತ್ತ 

ಕೃಷ್ಣಾ ಎನಬಾರದೇ


ಕೀಬೋರ್ಡಿನಿಂದ ಕೈಬೆರಳುಗಳ  ಬದಿಗಿರಿಸಿ 

ಕೃಷ್ಣಾ ಎನಬಾರದೇ

ಮೇಲೆದ್ದು ಸೊಂಟವನು ನೆಟ್ಟಗಾಗಿಸುತ್ತಲೊಮ್ಮೆ  

ಕೃಷ್ಣಾ ಎನಬಾರದೇ


ಸ್ವಿಗ್ಗಿಯವ ತಂದಿಟ್ಟ ಹುಗ್ಗಿಯನು ನುಂಗುತ್ತ 

ಕೃಷ್ಣಾ ಎನಬಾರದೇ

ರಘುನಂದನನ ಪೊರೆವ ಅಘಭಂಜಕನ ನೆನೆದು 

ಕೃಷ್ಣಾ ಎನಬಾರದೇ


No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...