Wednesday, 9 February 2022

ಶ್ರೀಮದಾನಂದತೀರ್ಥರ ಶ್ರೀಮಚ್ಚರಣಗಳಲ್ಲಿ

ಶ್ರೀ ಮಧ್ವಾಂತರ್ಗತ ಶ್ರೀ ಲಕ್ಷ್ಮಿನಾರಾಯಣರ ಪ್ರೇರಣೆಯಿಂದ, ಅವರ ಸೇವೆಯೆಂದು,

ಇಂದು ಮಧ್ವನವಮಿಯ ಶುಭ ಸಂಧರ್ಭದಲ್ಲಿ  ಶ್ರೀಮದಾನಂದತೀರ್ಥರ 

ಶ್ರೀಮಚ್ಚರಣಗಳಲ್ಲಿ ಸಮರ್ಪಣೆ 


ತ್ರೇತೆಯಲಿ ಹನುಮ ನೀ ಶ್ರೀರಾಮನ ಬಂಟ 

ದ್ವಾಪರದಲಿ ಭೀಮ, ನಮ್ಮ ಕೃಷ್ಣನ ನೆಂಟ 

ಕಲಿಯುಗದಿ ಅವತರಿಸಿ ಮಧ್ವರಾಯನೆಂದು 

ಉಡುಪಿಯಲಿ ನಿಲ್ಲಿಸಿದೆ ಕೃಷ್ಣನೆಳೆತಂದು !


ಪಾಕಶಾಸ್ತ್ರ ಪ್ರವೀಣ ದ್ವಾಪರದ ಭೀಮ 

ಶಾಸ್ತ್ರಪಾಕವಿಳಿಸಿದನಮ್ಮ ಮಧ್ವ ಮಹಿಮ 

ನೀ ಬರೆದ ಭಾಷ್ಯ, ತಾತ್ಪರ್ಯ, ಸಾರ 

ಹರಿಭಕ್ತಿ, ತಾರತಮ್ಯ, ಬೇಧ ನಮಗಾಧಾರ 


ತಂದೆ ನೀ, ತಾಯಿ ನೀ, ಗುರು ಭಾತೃ ನೀನು 

ಪ್ರಾಣ, ನೀನಿರುವವರೆಗೆ ಆಡುವೆನು ನಾನು 

ಕೃಪೆಮಾಡು ಹರಿಯಲ್ಲಿ, ನಿನ್ನಲ್ಲಿ, ಭಕ್ತಿ 

ನಿನ್ನ ಪಾದಧೂಳಿಯಿಂದಲೇ ನಮಗೆ ಮುಕ್ತಿ.   


ಶಾಸ್ತ್ರ ಪ್ರಕಾರವರಿಯೆ ಪಾಮರನು ನಾನು 

ಸಂಸಾರ ಕೂಪದೊಳು ಈಜುತಿಹ ಮೀನು 

ನನ್ನ ಮನ, ಒಳ ಹೊರಗ, ತಿಳಿದಿಹನು ನೀನು 

ಸ್ವಾಮಿ, ನೀ ಸತತ ಪೊರೆ ಈ ರಘುನಂದನನು 


No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...