Thursday, 24 March 2022

ಒಜ್ಜೆ - ಲಜ್ಜೆ



ಯಾವುದೋ ಮದುವೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದಾಗ ಹಿಂದಿನಸಾಲಿನಲ್ಲಿದ್ದ ಹೆಂಗಳೆಯರ ಮಾತು ಕಿವಿಗೆ ಬೀಳುತ್ತಿತ್ತು. ಅದೂ, ಇದೂ, ಇಪ್ಪತ್ತೆಂಟು !  ಏನೋ ಪದಾರ್ಥ ಬಡಿಸಲು ಬಂದಾಗ ಒಬ್ಬಾಕೆ ತಮಗೆ ಬೇಡವೆಂದರು. ಪಕ್ಕದವರು “ಅದ್ಯಾಕೆ ? ಒಂದು ಹಾಕಿಸ್ಕೊಳ್ರಿ ಪರವಾಗಿಲ್ಲ”  ಎಂದಾಗ,  “ಅಯ್ಯೋ ಬೇಡಾರಿ, ವೆಯ್ಟ್ ಜಾಸ್ತೀನೇ ಆಗ್ತಾ ಇದೆ. ಏನೇನ್ ಮಾಡಿದ್ರೂ ಕಡಿಮೆಯಾಗಲ್ಲ. ನನ್ನಿಂದ ಸಾಧ್ಯವಿಲ್ಲ. ದೇವರೇಗತಿ.” ಎಂಬ ಉತ್ತರ ಬಂತು. ಆ ಸಂಭಾಷಣೆಯಿಂದ ಪ್ರೇರಿತವಾದ ಅಣಕು ಪದ್ಯ.  


ಹಸಿವ ಕೊಟ್ಟವ ನೀನು, ಹಿಟ್ಟು ಕೊಟ್ಟವ ನೀನು 

ಹಿಟ್ಟಿನೊಳಗೆ ನೀನು, ಹಿಟ್ಟನಟ್ಟುವ ಬೆಂಕಿಯಲಿ ನೀನು 

ಹಿಟ್ಟನುಂಡವ ನೀನು, ಉಂಡ ಹೊಟ್ಟೆಯೊಳು 

ಜಠರಾಗ್ನಿ ನೀನು. 


ನಿನ್ನ ಹಿಟ್ಟಿನಾಟದಿ ಬೆಳೆದ ಹೊಟ್ಟೆಯನೆನಗೆ ಕಟ್ಟಿ 

ಸೊಂಟಕ್ಕೆ ಕೈಯಿಟ್ಟು ನಿಂತೆಯಲಾ, ಹರಿ ವಿಠ್ಠಲ!

ಬೆಟ್ಟ ಹೊತ್ತವ ನಿನಗೆ ಭಾರವೆನಿಸಿದ ಹೊಟ್ಟೆಯನು  

ದಿಕ್ಕೆಟ್ಟ ನಾನೆಂತು ಹೊರಬೇಕೋ ಹರಿಯೇ?


ನಿನಗಸದಳವಾದ ಕಾರ್ಯವಿಲ್ಲೆಂಬ ಖ್ಯಾತಿ 

ಮೈ ಭಾರವ ಕಳೆವುದೆನಗಸದಳವೆಂಬ ಭೀತಿ 

ಹತ್ತುಬಾರಿ ಇಳಿದಿಳೆಯ ಭಾರ ಕಳೆದಿಹೆ ನೀನು  

ಒಮ್ಮೆ ಬಂದೆನ್ನ ಭಾರ ಕಳೆ, ಬೇಡುವೆನು ನಾನು 


ಆಗದಾಗದೆಂದೆನ್ನ ದೂಡಬೇಡವೊ ದೊರೆಯೇ 

ಒಜ್ಜೆ ನನಗಾದರೆ ಲಜ್ಜೆ ನಿನಗೋ ಹರಿಯೆ  

ಅಬ್ಜಜನಪ್ಪನೆನಿಪ್ಪ ಅರವಿಂದ ನಯನಾ 

ಸಂತತ ಪೊರೆಯೋ ಈ ರಘುನಂದನನ !




No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...