ಭಾಗವತ ಪ್ರವಚನವೊಂದರಲ್ಲಿ ಕೃಷ್ಣ ಮಲಗಿದ್ದ ರೀತಿಯನ್ನು ಕೇಳಿದಾಗ ಸಂಸ್ಕೃತ ಶ್ಲೋಕವೊಂದು
ನೆನಪಾಯಿತು. “ಕರಾರವಿಂದೇ ಪದಾರವಿಂದಂ, ಮುಖಾರವಿಂದೇ ವಿನಿವೇಶಯಂತಂ,
ವಟಸ್ಯ ಪತ್ರಸ್ಯ ಪುಟೇ ಶಯನಂ, ಬಾಲಂ ಮುಕುಂದಂ ಮನಸಾ ಸ್ಮರಾಮಿ”. ಅದನ್ನು ಕನ್ನಡದಲ್ಲಿ
ಒಂದು ಪದ್ಯವಾಗಿಸುವ ಪ್ರಯತ್ನ ಮಾಡಿದ್ದೇನೆ.
ಕೆಂದಾವರೆ ಕರಗಳಿಂದ
ಕೆಂದಾವರೆ ಪಾದ ಪಿಡಿದು
ಕೆಂದಾವರೆ ಮೋರೆಯತ್ತ
ಲೀಲೆಯಿಂದ ಸೆಳೆಯುತ್ತಾ
ಹವಳಗೆಂಪು ಅಧರದೊಳಗೆ
ಹವಳದಂಥ ಬೆರಳತಳ್ಳಿ
ಆಲದೆಲೆಯ ಪಲ್ಲಂಗದಿ
ವಿಲಾಸದಿಂದ ಪವಡಿಸಿರುವ
ಫುಲ್ಲಲೋಚನ ಗೋವಿಂದ
ಗೊಲ್ಲಬಾಲನನ್ನು ನಮಿಸಿ
ನಲ್ಮೆಯಿಂದ ಪಾಲಿಸೆಂದು
ಒಲ್ಮೆಯಿಂದ ಬೇಡಿಕೊಂಬೆ.
ಕೃಷ್ಣಾರ್ಪಣಮಸ್ತು.
No comments:
Post a Comment