Wednesday, 20 July 2022

ನನ್ನ ಗಾಯನ, ಮಂಗಟ್ಟೆಯ ಗಾಯನ !



ಶಾಲೆಯಲ್ಲಿ 

ವಾರ್ಷಿಕೋತ್ಸವಕ್ಕೆ 

ಪದ್ಯ ಹೇಳಲಿಕ್ಕೆ  

ನಡೆದಿತ್ತು ಆಯ್ಕೆ. 

ನಾ ಹಾಡಿದೆ

ಗೋವಿನ ಹಾಡು  

“ಗೊಗ್ಗರು ದನಿಯಪ್ಪಾ, 

ಬೇಡ” ಎಂದರು 

ನಮ್ಮ ಟೀಚರು 


ಗೆಳೆಯರ ಬಳಗದಲ್ಲಿ 

ಸಿನಿಮಾ ವಿಷಯದಲ್ಲಿ  

ಮಾತು ಮಸೆದಿದ್ದಾಗ

ಬಿತ್ತು ಬಾಯಿಂದ  

ಸಿನಿಮಾ ಹಾಡು.   

“ನೀನೇನಂದರೂ ಗುರು, 

ಕೇಳುತೀನಿ, ಆದರೂ  

ಹಾಡಬೇಡ ಮಾತ್ರ, ದೇವರು!” 

ಚಡ್ಡಿ ದೋಸ್ತನೆಂದ 

ಕಡ್ಡಿ ಮುರಿದಂತೆ  

 

ಮುಂಜಾನೆ, 

ಕಾಫಿಗಾಗಿ ಕಾಯುತ್ತಿದ್ದೆ 

ಸಂದೇಶಗಳ ನೋಡುತ್ತಿದ್ದೆ  

ಯಾರೋ ಹಾಕಿದ್ದರು  

ಒಂದು ಭಕ್ತಿ ಗೀತೆ. 

ಅರಿವಿಲ್ಲದೆಯೇ 

ನನ್ನ ಬಾಯಿಂದ ಹೊರಬಿತ್ತು 

ದಾಸರದೊಂದು ಮುತ್ತು.   

“ಬೆಳಗ್ಗೆದ್ದು ಏನು ಗಲಾಟೆ,

ಸಾಕು ನಿಮ್ಮ ಸಂಗೀತ” 

ನನ್ನ ಅರ್ಧಾಂಗಿ,

ಸೂಚಿಸಿದಳು ಸೌಮ್ಯವಾಗಿ, 

ತನ್ನ ಇಂಗಿತ ! 


ಮನೆಯ ಸುತ್ತಮುತ್ತ 

ಮರ ಗಿಡಗಳಲ್ಲಿ 

ಅಡಗಿರುತ್ತವೆ 

ಕೋಗಿಲೆ,ಗೋಪಿಹಕ್ಕಿ, 

ಮಂಗಟ್ಟೆ, ಮೀಂಚುಳ್ಳಿ. 

ಅನುದಿನದ ಶ್ರವಣ 

ಕೋಗಿಲೆ, ಗೋಪಿಹಕ್ಕಿಯ 

ಸುಮಧುರ ಗಾನ.  

ಜತೆಗೇ, 

ಮಂಗಟ್ಟೆ, ಮೀಂಚುಳ್ಳಿಯ

ಕರ್ಕಶ ತಾನ 


ಕೇಳಿಗೊತ್ತೆ ನಿಮಗೆ 

ಮಂಗಟ್ಟೆಯ ಗಾನ ? 

ಮಂಗಟ್ಟೆ  ತೆರೆದರೆ ಬಾಯಿ, 

ಇತರ ಪಕ್ಷಿಗಳೆಲ್ಲಾ ಸ್ಥಾಯಿ !! 

ಮಂಗಟ್ಟೆಗೆ ಗೊತ್ತೇ 

ತನ್ನ ದನಿಯ ತನಿ?

ಕಂಡಿತು ನೇಸರನ ಬನಿ  

ಮಂಗಟ್ಟೆ ಎತ್ತಿತು ದನಿ !   


ನನ್ನ ಎದೆಯೊಳಗೆ 

ಹುದುಗಿ ಕುಳಿತಿಹ 

ಮಂಗಟ್ಟೆ 

ಒಮ್ಮೊಮ್ಮೆ ಎಚ್ಚತ್ತು 

ಬಿಚ್ಚುತ್ತದೆ ಗಂಟಲು. 

ಹಕ್ಕಿ ಸ್ವಭಾವ, 

ಬೆಚ್ಚಬೇಕಿಲ್ಲ.  

ಕಚ್ಚುವುದಿಲ್ಲ !! 

 


No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...