Friday, 25 September 2020

ಮಳೆಗಾಲದ ಮುಂಜಾವು

ಮಳೆಗಾಲವಲ್ಲವೇ ? ಒಂದು ವಾರದಿಂದ ಬಿಡದೆ ಸುರಿಯುತ್ತಿದೆ

ಮಳೆ. ಸುರಿಯುವ ಮಳೆಯಿಂದ ನಮ್ಮ ಬೀದಿಯ ಎಲ್ ಈ ಡಿ

ದೀಪಗಳಿಗೂ  ಥಂಡಿಯಾಗಿ ಅವು ಥಣ್ಣಗೆ ಕಣ್ಮುಚ್ಚಿ ಕುಳಿತಿವೆ.

ನಸುಕಿನಲ್ಲಿ ಐದುಘಂಟೆಯ ಸಮಯ. ಸುರಿಯುತ್ತಿರುವ ಮಳೆ,

ಮಳೆಯಿಂದಾಗಿ ಅಲ್ಲಲ್ಲಿ ಪಾಚಿಕಟ್ಟಿದ ರಸ್ತೆ, ರಸ್ತೆಯಲ್ಲಿ ಹರಿವ ನೀರು,

ಕೃಷ್ಣಪಕ್ಷದ ಕತ್ತಲು, ಅರವತ್ತು ದಾಟಿದ ಕಣ್ಣುಗಳು, ಕಳಚಿಕೊಳ್ಳಲು

ಸಮಯ ಕಾದಿರುವ ಕೈಕಾಲುಗಳು ! ಅವಘಡಕ್ಕೆ ಅಹ್ವಾನವಲ್ಲವೇ?

ಅಲ್ಲದೆ  ನೀರಿನೊಡನೆ ಹಾವೋ ಮತ್ತೊಂದೋ ಕೂಡ

ಹರಿಯುತ್ತಿರಬಹುದು. ಆದರೆ ಅಭ್ಯಾಸ ಬಿಡದು. ಹಾಗೆಂದೇ,

ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಲ್ಲಿ ಕೈದೀಪ (ಟಾರ್ಚ್)

ಹಿಡಿದು  ಸಂಚಾರ ಹೊರಟಿದ್ದೆ. ನನ್ನ ಕೈದೀಪದ ಪ್ರಖರ ಬೆಳಕು 

ಕತ್ತಲನ್ನು ಕತ್ತರಿಸಿ ಹರಿವ ನೀರಿನಮೇಲೆ ಸರಿಯುತ್ತಿತ್ತು. 

ಇದು ಕೆಳಗಿನ ಸಾಲುಗಳ ಸಂಧರ್ಭ. 


ಮಳೆಗಾಲದ ಮುಂಜಾವು 


ಹರಿವ ನೀರಿನ 

ರಂಗಮಂಚದ ಮೇಲೆ 

ಸುರಿವ ವರ್ಷಧಾರೆ 

ಸೃಷ್ಟಿಸಿದೆಯೊಂದು 

ಜಲಲಾಸ್ಯದ ಜಾಲ 


ನೀರ ನರ್ತನಕ್ಕೆ,  

ತಲೆಯ ಮೇಲಿನ 

ಕೊಡೆಯ ಮೇಲ್ಗಡೆ 

ಕುಣಿವ ಹನಿಗಳ 

ಟಪ ಟಪ ತಾಳ 


ಬೆಳಕು ಶಬ್ದಗಳ 

ಈ ಮೇಳಕ್ಕೆ 

ಅಕ್ಕಪಕ್ಕದಲಿ 

ಕಿಕ್ಕಿರಿದಿರುವ 

ಹಸುರಿನಲಿ ಹುದುಗಿರುವ 

ಕೋಟಿ ಕೀಟಗಳ 

ಹಿಮ್ಮೇಳ !


No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...