ಗಾಂಧಿಜಯಂತಿ ಸರಿಯುವ ಹೊತ್ತಿಗೆ ಶ್ರೀ ಟಿ ಪಿ ಕೈಲಾಸಂ ಅವರ ‘ರೆಸಿಪಿ’ ಪದ್ಯ ನೆನಪಾಯಿತು.
ತತ್ತ್ ಕ್ಷಣದಲ್ಲಿ ತಿಳಿದಮಟ್ಟಿಗೆ ಕನ್ನಡಕ್ಕಿಳಿಸಿ ಇಲ್ಲಿರಿಸಿದ್ದೇನೆ.
ಅಂಗೈಲಿಹಿಡಿಸುವಷ್ಟು ಮೂಳೆ, ಚಕ್ಕಳವ ತೆಗೆದುಕೊಂಡು
ಅದರಲ್ಲಿ ಚಟಾಕಿನಷ್ಟು ರಕ್ತ ಮಾಂಸ ತುಂಬಿರಿ
ಸಮುದ್ರದುಬ್ಬರವನ್ನು ಹೋಲುವ ಹೃದಯವೊಂದನ್ನಿರಿಸಿರಿ
ಜತೆಗೆ ಸಮುದ್ರದಾಳದ ಪಾಪಕಾಣದ ಬುಧ್ಧಿಸೇರಿಸಿರಿ
ಎರಡು ಆನೆಕಿವಿ ಅಂಟಿಸಿರಿ, ಮತ್ತೆರಡು ಮಂದ ಕಣ್ಣುಗಳು
ತಾಯ ಎದೆಮೇಲಿನ ಹಸುಗೂಸಿನ ನಗುವ ಬರೆಯಿರಿ
ಹಿಮವತ್ಪರ್ವತದೆತ್ತರದ ಆತ್ಮವ ಒಳಗೆ ತೂರಿಸಿರಿ
ಜೇನಿಳಿಯುವಂಥ ನಾಲಗೆಯೊಂದಾಡುತಿರಲಿ
ಉಳಿದ ಜಾಗವ ಮೇಕೆಹಾಲು ಕಡಲೆಕಾಯಿಂದ ತುಂಬಿ
ಜೈಲಿನೊಳಗೆ ಕೆಲವು ವರುಷ ಬೇಯಿಸಿರಿ
ಹೊರತೆಗೆದು ಸುತಮುತ್ತ ಹರಿಜನರ ಸಿಂಪಡಿಸಿರಿ
ಚಿಂದಿಯಲಿ ಮುಚ್ಚಿ, ಒಂದು ಕೋಲ ಒತ್ತಾಸೆಗಿಟ್ಟು ನಿಲ್ಲಿಸಿರಿ
ಇದೋ ಕೊಳ್ಳಿ, ಜಗದೋದ್ಧ್ಹಾರಕ ನಮ್ಮ ‘ಬಾಪು’ವನ್ನು ಬಡಿಸಿರಿ!
No comments:
Post a Comment