ಶರತ್ಕಾಲ ಕಾಲಿಟ್ಟಂತೆ, ನಾನು ನಿತ್ಯ ಕಾಣುತ್ತಿರುವ ಚಿತ್ರ.
ಮಳೆಯಲ್ಲಿ ತೊಳೆದ ಸಸ್ಯರಾಶಿ ಹಚ್ಚಗೆ ನಳನಳಿಸುತ್ತಾ ತೆಳ್ಳನೆಯ ಮಂಜಿನ ಆವರಣದೊಳಗೆ ಮುಸುಗಿದೆ.
ಮಳೆಯಲ್ಲಿ ಮುದುಡಿದ್ದ ಪಾರಿಜಾತದ ಮೊಗ್ಗು, ಈಗ ಬಿರಿದು ಕಂಪು ಹರಡಿದೆ. ಬಾನಲ್ಲಿ ಬೆಳ್ಳಕ್ಕಿಗಳು ಗುಂಪು
ಗುಂಪಾಗಿ ಹಾರುತ್ತಿವೆ. ಮುಂಜಾನೆಯ ತಂಪಿನಲಿ ಹವ್ಯಾಸಿ ಕಲಾವಿದನೊಬ್ಬ ರಸ್ತೆಯ ಬದಿ ಕುಳಿತು ಕೊಳಲ
ವಾದನವನ್ನು ಕರಗತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಮುಂಜಾನೆಯ ಅರೆಗತ್ತಲ ಈ
ಪರಿಸರದಲ್ಲಿ ಮನವರಳಿ ನಲಿಯುತ್ತದೆ.
ಹಚ್ಚ ಹಸುರು ಸಸ್ಯರಾಶಿ
ಧರೆಯುಟ್ಟ ಉಡುಗೆ.
ಆವರಿಸಿದೆ ತೆಳು ಮಂಜಿನ
ಬಿಳಿ ಮೇಲುದೆಯ ತೊಡುಗೆ
ತಂಪೆಲರಲಿ ಸೂಸುತ್ತಿದೆ
ಪಾರಿಜಾತದ ಕಂಪು
ತನ್ನೊಟ್ಟಿಗೆ ಕರೆತಂದಿದೆ
ಕೊಳಲದನಿ ಇಂಪು
ಆಗಸದಿ ಹಾರುತಿದೆ
ಬಿಳಿ ಬೆಳ್ಳಕ್ಕಿ ಮಾಲೆ
ಇಟ್ಟಂತೆ ಮುಂಜಾನೆ
ಮುಗಿಲಲ್ಲಿ ರಂಗೋಲೆ !
ಬಿರುಮಳೆಯಲಿ ತಣಿದು
ಭುವಿ ಈಗ ತಂಪು
ಕಾಣಿರಿದು ನನ್ನೂರಿನ
ಶರತ್ಕಾಲನ ಪೆಂಪು !
No comments:
Post a Comment