Tuesday, 7 April 2020

ಗೋಪೀ ಹಕ್ಕಿ

ದೇಶಕ್ಕೆ ಬೀಗ ಬಿಗಿದಿದ್ದರೂ, ಮುಂಜಾನೆ ಬೆಳಕಾಗುವ ಮುಂಚೆ ಬೀಗ ಸಡಿಲಿಸಿ  ಅರ್ಧತಾಸು ವಾಯುಸಂಚಾರ
ಮಾಡಿಬಿಡುತ್ತೇನೆ. ನಮ್ಮ ಮನೆಯ ಸಮೀಪದಲ್ಲಿರುವ ಒಂದು ಸಣ್ಣ ತೊರೆಯ ಸುತ್ತಮುತ್ತ ಬೆಳೆದುಕೊಂಡು,
ಉಳಿದುಕೊಂಡಿರುವ ಮರಗಳಲ್ಲೊಂದರಲ್ಲಿ ‘ಮಲಬಾರ ವಿಸಿಲಿಂಗ್ ತ್ರಷ್’ ಎಂದು ಕರೆಸಿಕೊಳ್ಳುವ ಈ ಹಕ್ಕಿಯ
ಗಾನ ವರುಷಕ್ಕೊಮ್ಮೆ, ಕೆಲವುದಿನಗಳ ಕಾಲ, ತಪ್ಪದೆ ಕೇಳಿಬರುತ್ತದೆ. 
ನಾನು ಒಮ್ಮೆಯೂ ಆ ಜಾಗದಲ್ಲಿ ಅದನ್ನು ಕಂಡಿಲ್ಲ. ಆದರೆ ವರುಷಕ್ಕೊಮ್ಮೆ ಆ ಹಕ್ಕಿ ಕೂಗಿ, ತಾನಿನ್ನೂ
ಬದುಕಿದ್ದೇನೆಂದು ತಿಳಿಸಿದರೆ ನನ್ನ ಮನಸ್ಸಿಗೆ ಅದೇನೋ ಸಮಾಧಾನ. ಈ ವರುಷ ಸಮಯ ಮೀರಿದರೂ
ಅದರ ಕರೆ ಕೇಳಿಬರದೆ ಕೊಂಚ ಬೇಸರವಾಗಿತ್ತು. ಈ ಮುಂಜಾನೆ ಅದನ್ನು  ಕೇಳಿ ಬಹಳ ಸಂತೋಷವಾಯಿತು.
ಆ ಸಮಯದಲ್ಲಿ ಹೊಳೆದ ಕೆಲವು ಸಾಲುಗಳನ್ನು ಬೆಳಸಿ ಇಲ್ಲಿ ತಂದಿದ್ದೇನೆ. 
ಮುಂಜಾನೆಯ ನಿಶ್ಯಬ್ಧ ವಾತಾವರಣದಲ್ಲಿ, ಅದೆಲ್ಲೋ ಕೊಂಚ ದೂರದಲ್ಲಿ, ಗಿಡ ಮರಗಳ ಮಧ್ಯದಿಂದ
ತೂರಿಬರುವ ಆ ಗಾನ ಮನಸ್ಸಿಗೆ ಆಹ್ಲಾದಕಾರಕವೆನಿಸುತ್ತದೆ.
ಹಕ್ಕಿಯನ್ನು  ಕಂಡಿಲ್ಲದವರ ಅನುಕೂಲಕ್ಕೆಂದು ಅದರ ಚಿತ್ರವನ್ನು ಇಲ್ಲಿ ತಂದಿರಿಸಿದ್ದೇನೆ. 
ಗಾನ, ಚಿತ್ರ, ಅಂತರಜಾಲದಿಂದ ಪಡೆದುಕೊಂಡದ್ದು. 
ಸಾಲುಗಳು ನಾನು ಓದಿರುವ, ಮತ್ತು  ಆ ಮೂಲಕ ನನ್ನ ಮನದಲ್ಲಿ ಹೊಕ್ಕು ಹುದುಗಿರುವ ಅದೆಷ್ಟೋ
ಮಹಾನುಭಾವರ ಬರಹಗಳ ಪ್ರಭಾವ. 
ಬೆರಳಚ್ಚು ಮಾಡಿದವ ನಾನೆಂದು ಧೈರ್ಯವಾಗಿ ಹೇಳಬಲ್ಲೆ !





ಈ ಹಕ್ಕಿ ಕೂಗುವುದ ಕೇಳಿದೆ 
ಅರೆಗತ್ತಲಿನ ಬೆಳಗಿನಲ್ಲಿಂದು.   
ಅದೇನು ವಿಶೇಷ ಎನ್ನುವಿರೇನೋ ?
ವಿಶೇಷ ಹೀಗಿದೆ ನೋಡಿ. 
ಇದು ದಿನವಿಡೀ ಕೂಗುವುದಿಲ್ಲ,
ತ್ರ. 
ವರುಷವಿಡೀ  ಕೂಗುವುದಿಲ್ಲ,
ವಸಂತದಲ್ಲಿ ಮಾತ್ರ.
ಮತ್ತೆ, ನಾನದನು ಕಂಡಿಲ್ಲ
ಆಲಿಸಿದ್ದೇನೆ ಮಾತ್ರ !  

ನಿಜವೆಂದರೆ, ಇದು ಕೂಗುವುದಿಲ್ಲ,
ಕೋಗಿಲೆಯಂತೆ,
ಪದೇ ಪದೇ ಒಂದೇರಾಗದಲ್ಲಿ.  
ಈ ಹಕ್ಕಿ ಹಾಡುತ್ತದೆ,
ಸುಮಧುರವಾಗಿ, 
ಸರಾಗವಾಗಿ, ಸ್ಪಷ್ಟವಾಗಿ,
ಸಂಗೀತದಂತೆ !

ಮತ್ತಿದು 
ಎಲ್ಲೆಂದರಲ್ಲಿ ಅಲೆಯುತ್ತಾ 
ವಲಸೆಹೋಗುವುದಿಲ್ಲ.  
ವರುಷ ವರುಷಗಳ ಕಾಲ
ಇರುತ್ತದೆ ಇರುವೆಡೆಯೆಲ್ಲೇ.  
ಯಾರರಿವಿಗೂ ಬಾರದಂತೆ 
ಹಾರಾಡುತ್ತ, ಅಲ್ಲೇ 
ಸುತ್ತಮುತ್ತ.  

ವೈಶಾಖದ ಬಿಸಿಲು 
ವರ್ಷಕಾಲದ  ಮಳೆಯಂತೆ 
ವಸಂತದ ಈ ಗಾನ  
ಋತುಗಳ ತಾನ 
ಸರಿಯುಂಟೆಂಬ  ಭಾವನೆ 
ನೀಡುತ್ತದೆ ನನಗೆ.  
ಅದರಿಂದಲೇ, 
ಕಳವಳವಾಗಿತ್ತು ಮನಸಿಗೆ  
ಗಾನಕೇಳದೆ  ಈವರೆಗೆ.


ಹಾಡು ಕೇಳಿಬಂತು
ಇಂದು ಮುಂಜಾನೆ  
ಪ್ರತಿ ವಸಂತದಂತೆ 
ತಾನ  ತಪ್ಪದಂತೆ
ಕಿವಿಗಿಂಪೆನಿಸುವಂತೆ 
ಮನಹಗುರವಾಗುವಂತೆ  
ಎರಡು ಸಾಲು ಮೂಡುವಂತೆ !

ಬರೆದೆ ನೋಡಿ ಇಷ್ಟೆಲ್ಲಾ, 
ಆ ಹಕ್ಕಿಯ ಹೆಸರೇ 
ನನಗೆ ತಿಳಿದಿರಲಿಲ್ಲಾ !
ಅದು ಗೊತ್ತಾದದ್ದು ಇದೀಗ,  
ಗೂಗಲಿಸಿ ನೋಡಿದಾಗ !  
ಹೆಸರೂ ಸುಂದರ,
ಗಾನದಂತೆಯೇ ಮಧುರ !
ಗೋಪೀಹಕ್ಕಿ ಯಂತೆ !
ಕೃಷ್ಣನ ಕೊಳಲಿನ
ನೆನಪೇ ?!

Tuesday, 24 March 2020

ಬೀಗ ಬಿದ್ದಿದ್ದ ಯುಗಾದಿ




ಮುಂಜಾನೆಯೆದ್ದು ಹೊರಬಂದಾಗ 

ದೇಶಕ್ಕೆ ಬೀಗ ಬಿದ್ದಿತ್ತು 
ಸುತ್ತಲೂ ಕತ್ತಲಿತ್ತು 
ಮನದಲ್ಲಿ ಅಂಜಿಕೆಯಿತ್ತು 

ಆದರೆ  

ತಂಗಾಳಿ  ಬೀಸುತ್ತಿತ್ತು 
ಕೋಗಿಲೆ  ಕೂಗುತ್ತಿತ್ತು 
ಗಿಡದಲ್ಲಿ ಹೂವು ಅರಳಿತ್ತು 

ಕೆಲಸಮಯದಲ್ಲೇ 
ಕಿರಣಮೂಡುವುದೆನ್ನಿಸಿ 
ಕಳವಳ ಕಡಿಮೆಯಾಯಿತು 

ಮರಳಿ ಮರಳಿ ಬರುವ ಯುಗಾದಿ 
ತಮಗೆಲ್ಲಾ  ಶುಭ ಕೊಂಡುಬರಲಿ 


ಸೂರ್ಯ



ಬೆಳಗ್ಗೆ ಉದಯಕಾಲದ ಸಮಯಕ್ಕೆ ನಮ್ಮ ಬಾಲ್ಕನಿಗೆ ಬಂದರೆ, ನಮ್ಮ ಎದುರಿನಲ್ಲಿ ಇರುವ ಮರಗಳ
ಮರೆಯಿಂದ ನಮಗೆ ಸೂರ್ಯೋದಯ ಕಾಣಬರುವುದು ಹೀಗೆ.  ಸೂರ್ಯ ಉದಯಿಸುತ್ತಾನೆ ಪ್ರತಿದಿನ.
ಭಾವನೆಗಳು ಉದಯಿಸಿ ಸಾಲುಗಳು ಮೂಡುತ್ತವೆ ಒಂದೊಂದುದಿನ ! 
ವೈರಸ್ ಕಾರ್ಮೋಡದ ಮಧ್ಯದಿಂದ ಸುದಿನಗಳ ಆಶೆಯ ರವಿಕಿರಣಗಳು ತೂರಿಬರಲೆಂದು ಆಶಿಸುತ್ತಾ
ಇಂದಿನ ಎರಡುಸಾಲುಗಳನ್ನು ತಮ್ಮ ಮುಂದಿಟ್ಟಿದ್ದೇನೆ. 








ಅದೇ ದಿಕ್ಕು 
ಅದೇ ಜಾಗ 
ಅದೇ ಸಮಯ 
ಆಕಾರ, ಬಣ್ಣ. 


ಕಾಣುತ್ತೇನೆ ದಿನದಿನ 
ಇವನು ಹುಟ್ಟುವುದನ್ನ. 


ಆದರಿಲ್ಲಿ ನೋಡಿ,
ಇವನ 
ಹೆಚ್ಚುಗಾರಿಕೆಯನ್ನ,


ಶತ ಶತಮಾನ 
ಸಾವಿರಾರು ಜನ 
ಬರೆದು ಬರೆದು 
ಸುರಿದರೂ 
ತೀರದು ಇವನ 

ಗುಣಗಾನ ! 



Monday, 16 March 2020

ಕಂಪು ಸೂಸಿ ಕುಳಿತುದೇಕೆ ?


ಬೆಂಗಳೂರಿನ ಜಯನಗರದ ಮಾರುಕಟ್ಟೆಯಲ್ಲಿ ಸಂಜೆಯ ಸಮಯ ಮಾರಾಟಕಿಟ್ಟಿದ್ದ
ಹೂಗಳ ಮನೋಹರವಾದ ನೋಟ ಮನಸ್ಸಿಗೆ ಬಹಳ ಮುದವೆನ್ನಿಸಿತು.
ಆಗ ಮನದಲ್ಲಿ ಮೂಡಿದ ಕೆಲವು ಸಾಲುಗಳು ಒಂದುವಾರದ ತಿಣುಕಾಟದ
ನಂತರ ಒಂದು ರೂಪ ಪಡೆದಿವೆ. 






ಮೊಗ್ಗು ಬಿರಿದ ಮಲ್ಲಿಗೆ
ಸಂಪಿಗೆ ಶೇವಂತಿಗೆ
ಕನಕಾಂಬರ ಕೆಂಗುಲಾಬಿ    
ಕಂಗೊಳಿಸುವ ಮಾಲೆಯಾಗಿ 
ಸೊಂಪಾಗಿ ಸೊಗಯಿಸುತ್ತ  
ಕಂಪು ಸೂಸಿ ಕುಳಿತುದೇಕೆ ?


ಹರಿಯ ಕೊರಳ ಸುತ್ತ ಸುಳಿದು
ಒಲುಮೆಯಿಂದ  ಪಾದಕಿಳಿದು 
ನಲುಮೆಯಿಂದ ನಮಿಸಬೇಕೇ ? 


Monday, 16 December 2019

ಹಾದಿ ಬದಿಯ ಹೂವು - ಮಳೆರಾಯ

ಹಾದಿ ಬದಿಯ ಹೂವು 

ಅಗೆಯಲಿಲ್ಲ 
ಯಾರೂ 
ಬೀಜ ಒಗೆಯಲಿಲ್ಲ 
ಕುಣಿತೋಡಲಿಲ್ಲ 
ಸುತ್ತ 
ನೀರುಣಿಸಲಿಲ್ಲ 

ಬೆಳೆದು ಅರಳಿತು 
ತನ್ನಂತೆ ತಾನೇ 
ನನ್ನಂಥ 
ಕಾಣುವ ಕಂಗಳು  
ಚಣಕಾಲ 
ತಣಿಯಲೆಂದು 


ಮಳೆರಾಯ 


ಇಂದೇಕೋ ಬೇಗನೆ 
ಮುಗಿಯಿತು ನಿದ್ದೆ.
ಎದ್ದೆ.
ಹೊರಬಿದ್ದೆ.

ಸುತ್ತಲೂ 
ಇನ್ನೂ ಕತ್ತಲು.

ವಾಯು ಸಂಚಾರದ 
ಜತೆಗಾರರು 
ಯಾರೂ ಇಲ್ಲ. 
ಆದರೂ,
ಪರವಾಗಿಲ್ಲ. 
ನಡೆದೆ.

ಕೆಲವೇ ನಿಮಿಷದಲ್ಲಿ,
ಕಣ್ಣಿಗೆ ಬೀಳುವ ಮುಂಚೆ 
ಮೈಮೇಲೆಯೇ ಬಿದ್ದ.
ಅನೀರಿಕ್ಷಿತವಾಗಿ 
ಬಂದ 
ಈ ರಾಯ.
ಮಳೆರಾಯ !!


Saturday, 2 November 2019

ತಂಪು, ಕಂಪು, ಇಂಪು, ಪೆಂಪು !

ನನ್ನ ದೈನಂದಿನ ಮುಂಜಾನೆಯ ವಾಯುಸಂಚಾರದ ಸಮಯ ನಾಲ್ಕೂಮುಕ್ಕಾಲು - ಐದರಿಂದ,
ಆರು - ಆರೂವರೆಯವರಗೆ. ಬಹುತೇಕ ನಾನು ಹೊರಬೀಳುವ ಹೊತ್ತಿಗೆ ಜಗತ್ತಿನ್ನೂ ನಿದ್ದೆಯ
ಗುಂಗಿನಲ್ಲಿರುತ್ತದೆ. ನಸುಕಿನ ಆ  ತಂಪುಹವ, ಗಜಿಬಿಜಿಯಿಲ್ಲದ ಶಾಂತವಾತಾವರಣ ನನಗೆ
ಬಹಳ ಪ್ರಿಯವಾದದ್ದು. ನಾನು ನಡೆಯುವ ದಾರಿಯಲ್ಲಿ ಒಂದೆರಡು ಪಾರಿಜಾತದ ಗಿಡಗಳಿವೆ.
ರಾತ್ರಿ ಅರಳುವ ಈ ಹೂಗಳು ಬೆಳಗಿನಹೊತ್ತಿಗೆ ಕೆಳಗುದುರಿ ಗಿಡದಡಿಯಲ್ಲಿ ಚಿತ್ತಾರ ಮಾಡಿರುತ್ತವೆ.
ನಡೆಯುತ್ತಿರುವಾಗ, ಒಮ್ಮೊಮ್ಮೆ, ಬೀಸಿಬಂದ ತಂಗಾಳಿಯೊಡನೆ ಪಾರಿಜಾತದ ಸುಗಂಧ ಮೂಗಿಗೆ
ತಲುಪುವುದುಂಟು. ಹಾಗೆಯೇ, ಯಾವುದೋ ಮರದಲ್ಲಿ ಅಡಗಿ ಕುಳಿತ, ಯಾವುದೋ ಹಾಡು ಹಕ್ಕಿಯ
ಇಂಪಾದ ಇಂಚರ ಒಮ್ಮೊಮ್ಮೆ ಕಿವಿಗೆ ಬೀಳುವುದುಂಟು. ಹೊರಟ ಸಮಯ ಸರಿಯಿದ್ದು, ದಿಗಂತ
ಶುಭ್ರವಾಗಿದ್ದರೆ ಒಮ್ಮೊಮ್ಮೆ ಕೆಲವೇ ನಿಮಿಷಗಳ ಮಟ್ಟಿಗೆ, ಬಾನಿನಲ್ಲಿ ಕಿತ್ತಳೆ, ಕೆಂಪು, ಬಂಗಾರ ಬಣ್ಣಗಳ
ಸಿಂಗಾರ ನಾಟ್ಯ ಕಣ್ಣ ತಣಿಸುವುದುಂಟು. 
ಹತ್ತಾರು ವರುಷಗಳ ಕಾಲದಲ್ಲಿ ನಾನು ನೂರಾರುಬಾರಿ ಅನುಭವಿಸಿರುವ ಈ ಅಲ್ಪಸುಖಗಳ ಒಟ್ಟು
ಅನುಭವಗಳಿಗೆ ಒಂದು ರೂಪ ಕೊಡುವ ಪ್ರಯತ್ನ ಕೆಳಗಿನದು. 

ಇರುಳು ಮಳೆಬಿತ್ತಲ್ಲ 
ಮುಂಜಾನೆ
ಹೊರಹೆಜ್ಜೆಯಿಟ್ಟಾಗ 
ನೆಲಒದ್ದೆ 
ಹವೆ ತಂಪು ತಂಪು 


ಯಾರಮನೆಯಂಗಳದಿ  
ಅರಳಿಹುದೋ
ಪಾರಿಜಾತ
ಪರಿಸರವೆಲ್ಲಾ 
ಕಂಪು ಕಂಪು 


ನಸುಗತ್ತಲಿನ
ಮುಸುಕಿನಲೇ  
ನಿದ್ದೆತಿಳಿದೆದ್ದ 
ಹಾಡುಹಕ್ಕಿಯ ಗಾನ 
ಆಹಾ, ಇಂಪು ಇಂಪು 


ಗುಡ್ಡದ ಹಿಂದೆ 
ಅಡಗಿದ್ದ ರವಿ 
ಕೊಡವಿಕೊಂಡೆದ್ದಂತೆ
ಬಾನಾಯಿತು 
ಕೆಂಪು ಕೆಂಪು


ಮುದನೀಡುವ
ಈ ಅಲ್ಪಸುಖದ 
ಅನುಭವಗಳು   
ನನ್ನ ಜೀವಕ್ಕೆ 

ಪೆಂಪು,ಪೆಂಪು. 

Monday, 7 October 2019

ಸಂಜೆರಂಗಿನ ನೋಟ - ಮಾಟ and "ಕವಿತೆ ಎಲ್ಲಿ ?"






ಹಗಲುರುಳಿ, ಇರುಳೊಡನೆ 
ಸೇರುತಿಹ ಸಂಧ್ಯೆಯಲಿ 
ಹರಿವ ನದಿ, ಮೊರೆವ ಕಡಲ
ಸಂಗಮಿಪ  ಸಂಧಿಯಲಿ 
ದಿಗಂತದ ರಂಗದಲಿ    
ಪ್ರಕೃತಿಯ ರಂಗಿನಾಟದ 
ಮೆರಗು, 
ಕಂಗಳಿಗೊಂದು ಬೆರಗು !   
(ನೋಟಕ್ಕೆ,ಮಾಟಕ್ಕೆ   
ಮರುಳಾದ, 
ಕಣ್ ಮನ ನಗಳಿಗೆ 
ಇರುಳು 
ಎಂತಾಯಿತೋ
ಎಂಬುದೇ  
ಅರಿಯದಾಯಿತು !)


ಕವಿತೆ ಎಲ್ಲಿ ?


It is my practice to usually write a few lines to accompany a picture.
My writings are more of a rhyming caption rather than a poem.
Yesterday I posted a few pictures without any caption/poem.
One of my friends questioned, “ಕವಿತೆ ಎಲ್ಲಿ ?" Following is the answer ! 


ಎದೆಯೊಳಗೆ ಒಸರಿದರೆ
ಭಾವಗಳ ಒರತೆ, 
ನಾನೂ ಕೊರೆವೆ
ಒಂದೆರಡು ಕವಿತೆ 


ಇಲ್ಲ, ತಲೆದೂಗುವ 
ಸಹೃದಯರ ಕೊರತೆ
ಆದರೆ 
ಅವರ ಔದಾರ್ಯಕೂ
ಉಂಟಲ್ಲವೇ ಅಳತೆ ? 


ಕೊರೆತ ಮಿತಿಮೀರಿದರೆ
ಎರವಾದೀತೆಂದರಿತೆ
ಅದರಿಂದಲೇ ಈ ಬಾರಿ
ಕವಿತೆಯ ಮರೆತೆ !

















  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...