Friday, 3 July 2020

ರಾಮ ರಾಮ ರಾಮ ಎನುತ ಕಪಿಯು ಹಾರಿತು

ರಾಮ ರಾಮ ರಾಮ ಎನುತ ಕಪಿಯು ಹಾರಿತು 
ರಾಮ ಪೂರ ಹರಿಸಿ ಲಂಕೆ ಕೊಚ್ಚಿ ಹೋಯಿತು 

ರಾಮ ರಾಮ ಎನುವ ಕೋತಿ  
ರಾಮದೂತ ನೆಂಬ ಜಾತಿ 
ರತುನದಂತೆ ಹೊಳೆವ ಮೂತಿ 
ಇಲ್ಲವದಕೆ ಭಯವು ಭೀತಿ 

ರಾಮ ರಾಮ ರಾಮ ಎನುತ ಕಪಿಯು ಹಾರಿತು  

ದೃಷ್ಟಿ ಬೀರೆ ವೈನತೇಯ 
ರಾಮ ರಾಮ ಎನುವ  ಕೋತಿ 
ದಾಡೆ ತೋರೆ ಶ್ರೀ ವರಾಹ 
ರಾಮ ರಾಮ ಎನುವ ಕೋತಿ  

ರಾಮ ರಾಮ ರಾಮ ಎನುತ ಕಪಿಯು ಹಾರಿತು

ನಖವ ತೋರೆ ನಾರಸಿಂಹ 
ರಾಮ ರಾಮ ಎನುವ  ಕೋತಿ
ವದನ ತೋರೆ ಹಯಗ್ರೀವ
ರಾಮ ರಾಮ ಎನುವ  ಕೋತಿ

ರಾಮ ರಾಮ ರಾಮ ಎನುತ ಕಪಿಯು ಹಾರಿತು

ರಾಮ ರಾಮ ಎನುವ  ಕೋತಿ
ಭಕುತಿಯೊಂದೆ ಅದರ ನೀತಿ 
ಸರ್ವರೊಳಗು ಜೀವ ಜ್ಯೋತಿ 
ಮುಖ್ಯ ಪ್ರಾಣ ಎಂದೆ  ಖ್ಯಾತಿ 

ರಾಮ ರಾಮ ರಾಮ ಎನುತ ಕಪಿಯು ಹಾರಿತು 

ರಾಮ ಪೂರ ಹರಿಸಿ ಲಂಕೆ ಕೊಚ್ಚಿ ಹೋಯಿತು 

Friday, 12 June 2020

ಮುಂಗಾರಿನ ಸಂಭ್ರಮ



ಪ್ರತಿವರುಷ ಏಪ್ರಿಲ್ - ಮೇ ತಿಂಗಳಲ್ಲಿ ಬಿಸಿಲು ಬಿರುಸಾಗಿ, ನಮ್ಮ ಕರಾವಳಿಯ ಹವೆಯಲ್ಲಿ ಬೆವರಿಳಿಸಿ
ಸಾಕಾಗಿ, ಜೂನ್ ತಿಂಗಳ ಮೊದಲವಾರಕ್ಕೆ ಶುರುವಾಗುವ ಮಳೆಗಾಲಕ್ಕೆ ಚಾತಕ ಪಕ್ಷಿಯಂತೆ
ಕಾಯುವುದಾಗುತ್ತದೆ. ಮುಂಗಾರು ಅಂಡಮಾನಿಗೆ ಬಂತು, ಕೇರಳ  ತಲುಪಿತು, ಮುಂತಾದ ಸುದ್ದಿಯನ್ನು
ಪತ್ರಿಕೆಗಳಲ್ಲಿ ನೋಡುತ್ತಿದ್ದಂತೆ ಮಳೆಯ ನಿರೀಕ್ಷೆ ಪ್ರಾರಂಭವಾಗುತ್ತದೆ.  ಮಳೆ ಒಂದು ವಿಶೇಷವೇನಲ್ಲ.
ಪ್ರತಿ ವರುಷದ ಅನುಭವ. ಆದರೂ ಮುಂಗಾರಿನ ಮೊದಲ ಮಳೆಬಿದ್ದಾಗ ಅದೇನೋ ಸಂಭ್ರಮ.       
ರಾತ್ರಿ ಹೊತ್ತು ಮಳೆಬಿದ್ದು ಎಚ್ಚರವಾದರೂ ಸಹ ಸದ್ದು ಕೇಳಿದ ತಕ್ಷಣ ಸಂಭ್ರಮದಿಂದ ಎದ್ದು ಕಿಟಕಿಯಬಳಿ
ನಿಂತು ಮಳೆಬೀಳುವುದನ್ನು ನೋಡಿ ಸಂತೋಷಪಡುತ್ತೇನೆ. 





ನಮ್ಮ ಜೀವನ ಶೈಲಿ, ಮತ್ತು ಪರಿಸರದೊಡನೆ ನಾವು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದಾಗ,

ಯಾವಾಗ ಪ್ರಕೃತಿ ಮುನಿದು ಮಳೆ ಬೆಳೆಗಳೇ ನಿಂತುಹೋಗುವವೋ ಎಂಬ ಭೀತಿ ನನಗೆ. ಅದರಿಂದಲೇ
ಕಾಲಕ್ಕೆ ತಕ್ಕಂತೆ ಮಳೆಬಿದ್ದಾಗ, ಪ್ರಕೃತಿದೇವಿ ಮತ್ತೊಮ್ಮೆ ನಮ್ಮನ್ನು ಕ್ಷಮಿಸಿ ದಯಮಾಡಿದಳೇನೋ ಎಂಬ
ಭಾವನೆ ಮೂಡುತ್ತದೆ.  ಮನ ಹಗುರವಾಗುತ್ತದೆ. ಅದರಿಂದಲೇ ಅಷ್ಟು ಸಂಭ್ರಮ.


ರಾತ್ರಿ ಕನಸೋ ಎಂಬಂತೆ   
ಕೊಂಚ ಮಳೆ ಬಿದ್ದ ಶಬ್ದ
ಅಷ್ಟೆ, ಇನ್ನೇನಿಲ್ಲ   
ಮತ್ತೆಲ್ಲಾ ಸ್ತಬ್ಧ  
ಮುಂಜಾನೆ ಬಾನಮುಚ್ಚಿತ್ತು  
ದಟ್ಟ ಮೋಡದ ತೆರೆ  
ಜತೆಗೆ ಸುರಿಯುತ್ತಲಿತ್ತು  
ಬಿರುಮಳೆಯ ಧಾರೆ 

ವರುಷದಿಂದ ಕವಿದಿದ್ದ  
ಕೊಳೆಧೂಳು ತೊಳೆದು 
ಹರುಷದಿಂದ ಹಸಿರೆಲೆಗಳು  
ನಲಿದು ಹಚ್ಚಗೆ ಹೊಳೆದು 
ಹಾಡುಹಕ್ಕಿಗಳು ಗೂಡೊಳಗೆ 
ಮುದುಡಿ ಬೆಚ್ಚಗೆ ಮುಚ್ಚಿ 
ಮಂಡೂಕ ಮಿಲನಗಾನ   
ಹಾಡುತಿರೆ ಮನಬಿಚ್ಚಿ 

ತಂಪಾಗಿತ್ತು ಬೆಂದು 
ಹಬೆಯಾಡುತ್ತಿದ್ದ ಇಳೆ 
ಮತ್ತೊಮ್ಮೆ ನಮ್ಮೂರಿಗೆ ಬಂತು 

ಮುಂಗಾರಿನ ಮಳೆ !  

Monday, 1 June 2020

ಸೂರ್ಯ - ಸಾಗರ

ಮೊನ್ನೆ ಮುಂಜಾನೆ ಕಡಲತಡಿಯಲ್ಲಿ ಅಲೆದಾಡುತ್ತಿದ್ದಾಗ, ಒಂದೆಡೆ ಏರುತ್ತಿದ್ದ ಸೂರ್ಯ
ಮತ್ತೊಂದೆಡೆ ಮೊರೆಯುತ್ತಿದ್ದ ಕಡಲ ಕಂಡ ಸಂಧರ್ಭದಲ್ಲಿ ಹೊರಬಿದ್ದ ಸಾಲುಗಳು.







ಮುಂಜಾನೆ ಮೂಡಣದಲ್ಲಿ 
ಬಂಗಾರದ ಬಣ್ಣ ಎರಚಿ 
ಬಾನಿಗೇರುತ್ತಾನೆ ಸೂರ್ಯ
ಸದ್ದಿಲ್ಲದೆ ಸರಿಯುತ್ತಾನೆ
ಉರಿಯುತ್ತಾನೆ 
ಜಗವ ಪೊರೆಯುತ್ತಾನೆ 
ತೂರಾಡುತ್ತ ಜಾರುತ್ತಾನೆ 
ದಿಗಂತದಂಚಿನೊಳಗೆ 
ಅದೆಷ್ಟು ಕೋಟಿ ವರುಷಗಳಿಂದಲೋ 

ಇತ್ತ, ಅಲೆಗಳೇಳುತ್ತವೆ
ಭೋರ್ಗರೆದು ಮೊರೆಯುತ್ತವೆ
ಅಪ್ಪಳಿಸಿ ಬೀಳುತ್ತವೆ
ದಡಕ್ಕೆ ಎಡತಾಕುತ್ತವೆ
ನೋಡುವರ ಕಾಲಡಿಯ 
ಮರಳ ಸೆಳೆಯುತ್ತಾ 
ಮರಳಿ ಮರಳುತ್ತವೆ 
ಶರಧಿಯೊಳಗಣ ಆಳದೊಳಕ್ಕೆ
ಅದೆಷ್ಟು ಕೋಟಿ ವರುಷಗಳಿಂದಲೋ

ಇದಕಂಡು ಬೆರಗಾದ 
ಕಂಗಳದೆಷ್ಟು ಕೋಟಿಯೋ
ಮೆಚ್ಚಿ ಮರುಳಾದ
ಮನಗಳೆಷ್ಟು ಕೋಟಿಯೋ
ಭಾವನೆಗಳ ಬರೆದಿಟ್ಟ
ಕರಗಳೆಷ್ಟು ಕೋಟಿಯೋ

ಈ ಕೋಟಿಗಳ ಕೂಟದೊಳಗೆ
ಇರಲಿಬಿಡಿ,

ನನ್ನದೂ ಒಂದು ಕಾಟ !

Saturday, 23 May 2020

ಪರಮಾತ್ಮನಿಗೆ ಪ್ರಿಯವಾದ ಪುಷ್ಪ



ಪೂಜ್ಯ ಬನ್ನಂಜೆಯವರ ಒಂದು ಪ್ರವಚನದ ಭಾಗವಾಗಿರುವ “ಭಗವಂತನಿಗೆ ಯಾವ ಪುಷ್ಪ ಅರ್ಪಿಸಬೇಕು”
ಎಂಬ ಏಳು ನಿಮಿಷದ ಸಣ್ಣ ವಿಡಿಯೋದ ತುಣುಕನ್ನು ಸ್ನೇಹಿತರೊಬ್ಬರು ಕಳಿಸಿದ್ದರು. ಅದನ್ನು ಕೇಳಿದ
ನಂತರ ಅದರ ಸಾರಾಂಶವನ್ನು  ಒಂದು ಪದ್ಯ  ರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.  



ಶ್ರೀ ಕೃಷ್ಣನಿಗೆ ಪ್ರಿಯವಂತೆ ಪಾರಿಜಾತ, ತುಳಸಿದಳ  
ನಿರ್ಗುಣಿ  ಶಿವನಿಗೆ ಸಾಕೊಂದು ಬಿಳಿಯ ಹೂ ಬಿಲ್ವದಳ 
ದೇವಿಗಾದರೆ ಬೇಕಲ್ಲ ಪೀತಾಂಬರ, ಕನಕಾಂಬರ 
ಗಣಪನಿಗಿರಬೇಕು ಕೆಂಪು ಹೂ, ಗರಿಕೆ, ಸಿಂಧೂರ 

ಹೀಗೆಲ್ಲಾ ನಮ್ಮ ಭಾವನೆಗಳು 
ಗಿಟ್ಟಬೇಕಲ್ಲವೇ ನಮ್ಮ ಕಾಮನೆಗಳು ?

ಪುಷ್ಪ ಯಾವುದತಿಯೋಗ್ಯ ಭಗವಂತನ ಪೂಜೆಗೆ  ?
ಪ್ರಶ್ನೆಯೊಂದು ಹಾರಿಬಂತು ಪೂಜ್ಯ ಆಚಾರ್ಯರೆಡೆಗೆ 
ತಿಳಿಸುವೆನು ಕೇಳಿ ಏನೆಂದಿತು ಅಗ್ನಿಪುರಾಣ 
ಎನ್ನುತಿಂತೆಂದರು ಬನ್ನಂಜೆಯ ಆಚಾರ್ಯ ಜಾಣ.  

ಪುಷ್ಪಗಳವು ಸಿಕ್ಕಲಾರವು ಬೆಲೆಗೆ ಮಾರುಕಟ್ಟೆಯಲ್ಲಿ 
ಬೆಳಸಬೇಕವನು ನಿಮ್ಮ ಹೃದಯತೋಟದಲ್ಲಿ 
ಬೇಕಿಲ್ಲ ಅವಕೇನು ನೀರು ಗೊಬ್ಬರ ಬೀಜ 
ಸಾಕಿಷ್ಟು ಶ್ರದ್ಧೆ, ಭಕುತಿ,ತಿಳುವಳಿಕೆ ಸಹಜ 

ಅರಳಲಿ  ಮೊದಲ ಪುಷ್ಪ, ಹೆಸರು ‘ಅಹಿಂಸೆ’  
ಯಾರ, ಮನಕೆ, ದೇಹಕೆ, ಬೇಡ ನಿನ್ನಿಂದ ಹಿಂಸೆ  
‘ಇಂದ್ರಿಯ ನಿಗ್ರಹ’ ವಾಗಲಿ ನಿನ್ನ ಎರಡನೆಯ ಪುಷ್ಪ 
 ಕಳೆಯದರಿಂದ ಕೊಳೆ ಕಾಮ, ಕೋಪ ತಾಪ 

ಮೂರನೆಯ ಪುಷ್ಪ ‘ದಯೆ’ ಅದುವೆ ಧರ್ಮದ ಮೂಲ 
ಇರಲಿ ಸರ್ವಭೂತಗಳಿಗಾಗಿ, ಲೋಪವಲ್ಲವದು, ಬಲ 
ನಾಲ್ಕನೆಯ ಪುಷ್ಪವದಾಗಬೇಕು  ‘ಕ್ಷಮೆ’ 
ಬೇಡ ಅಪಕಾರಿಗೆ ಪ್ರತೀಕಾರದ ಭ್ರಮೆ 

ಐದನೆಯ ಪುಷ್ಪ ‘ಜ್ಞಾನ’, ಆಗು ನೀ ಪಿಪಾಸು 
ಅದ ಸಾಧಿಸಲು ಬೆಳೆಸು ಆರನೆಯ ಪುಷ್ಪ  ‘ತಪಸ್ಸು’ 
‘ಧ್ಯಾನ’ ದ ಸುಗ್ಗಿಯಾಗಲಿ ಈ ಪರಿಪಕ್ವ ಮನದೊಳಗೆ 
‘ಸತ್ಯ’ ದ ಸೌರಭವಿರಲಿ ಈ ಏಳು ಪುಷ್ಪಗಳ ಜತೆಗೆ    

ಹೃದಯೋದ್ಯಾನದ  ಅಷ್ಟ ಕುಸುಮ ಸಮರ್ಪಣೆಯಿಂದ 
ಪರಮಾತ್ಮ ಸಂತೃಪ್ತ, ಕೇಳು ಸತ್ಯವಾಕ್ಯ ಚಂದ ! 

Thursday, 14 May 2020

ವಿಂಕ



ನಮ್ಮ ಅಂಗಳದಲ್ಲಿ ಅನೇಕ ಬಗೆಯ ಹೂಗಿಡಗಳು ಬೆಳೆದು, ಹೂಸುರಿದು, ಕೆಲಕಾಲ ಸೊಗಯಿಸಿ,
ಹಾಗೆಯೇ ಹುಳಹಿಡಿದು, ನಲುಗಿ, ಒಣಗಿ ಹೋಗಿವೆ. ಗುಲಾಬಿಗಳಿದ್ದವು. ಅನೇಕ ಬಣ್ಣ. ಕೆಲವುದಿನ ಚನ್ನಾಗಿ
ಬದುಕಿ ಹಾಗೇ ಬಾಡಿ ಹೋದವು. ಸುಂದರವಾದ ಬೆಟ್ಟ ತಾವರೆ, ಬಣ್ಣ ಬಣ್ಣದ ದಾಸವಾಳಗಳು ಬೆಳೆದು
ನಳನಳಿಸಿ, ಬುಟ್ಟಿ ತುಂಬಾ ಹೂಬಿಟ್ಟು ನಂತರ ಹುಳಬಿದ್ದು ಹಾಳಾದವು. ಮಲ್ಲಿಗೆ ಇನ್ನೂ ಉಂಟು. ಅದು
ಬೇಸಗೆಯಲ್ಲಿ ಮಾತ್ರ ಹೂಬಿಡುತ್ತದೆ. ಪಾರಿಜಾತ ಇದೆ. ಸಂಜೆವೇಳೆಗೆ ಅರಳತೊಡಗಿ ಸುಗಂಧ ಸೂಸುತ್ತದೆ,
ಮುಂಜಾನೆವೇಳೆಗೆ ನೆಲದಮೇಲೆ ಬಿದ್ದು ಗಿಡದಡಿ ಚಿತ್ತಾರ ಹಾಕುತ್ತದೆ, ತಾಸೆರಡುತಾಸಿನಲ್ಲಿ ಬಾಡಿಯೇ
ಹೋಗುತ್ತದೆ. ಮಳೆಯಿದ್ದರೆ ಹಾಳಾಗುತ್ತದೆ, ಚಳಿಯಿದ್ದರೆ ಅರಳುವುದಿಲ್ಲ !

ಆದರೆ ಈ ವಿಂಕ ಇದೆ ನೋಡಿ, ‘ವಿಂಕಾ ರೋಸಿಯ’ ಇದರ ಹೆಸರಂತೆ. ತಾನೇತಾನಾಗಿ ಬೆಳೆಯುತ್ತದೆ.
ಹರಡುತ್ತದೆ. ಮಳೆಯಲ್ಲೂ ಬದುಕುತ್ತದೆ, ಬಿಸಿಲಲ್ಲೂ ಬದುಕುತ್ತದೆ. ನಿತ್ಯ, ಗಿಡದಲ್ಲಿ ನಾಲ್ಕು ಹೂವಿರುತ್ತದೆ. 
ಮೊನ್ನೆ ನಾಲ್ಕು ಸಸಿ ತೆಗೆದು ಬೇರೆಡೆ ಹಾಕಿದೆವು. ತಂಟೆಯಿಲ್ಲದೆ ಬೆಳೆಯುತ್ತಿದೆ. ಹೀಗೆ ಹಾಕಿದ ಹೊಸ ಸಸಿಯಲ್ಲಿ
ನಿನ್ನೆ ಹೂಕಂಡಾಗ ಮನದಲ್ಲಿ ಮೂಡಿದ ವಿಚಾರವನ್ನು ಪ್ರಾಸ ಕೊಟ್ಟು ಬರೆದಿದ್ದೇನಷ್ಟೆ. ಡಿವಿಜಿ ಯವರ ‘ವನಸುಮ’
ವನ್ನು ನೆನಸಿಕೊಳ್ಳುತ್ತಾ. ಈ ಹೂವಿಗೆ ಕನ್ನಡದಲ್ಲಿ ‘ಸದಾಪುಷ್ಪ’ ಎನ್ನುತ್ತಾರೆಂದು ಈಗತಾನೇ ಗೂಗಲ್
ಗುರೂಜಿಯವರು ತಿಳಿಸಿದರು. ಅನ್ವರ್ಥನಾಮ !





ಕೆಲವು ಹೂಗಳ ಹೆಗ್ಗಳಿಕೆ, ಘಮ ಘಮ ಸುಗಂಧ 
ಕೆಲವದೇನು ಬಣ್ಣ, ರೂಪ, ನೋಡಲು ಬಲು ಚಂದ 
ಕೆಲವ ಕಂಡರೆ ಭಗವಂತನಿಗೆ ಬಲು ಪ್ರೀತಿ 
ಮತ್ತೆ ಕೆಲವ ಕಂಡರೆ ಸೂಸುತ್ತದಂತೆ ಪ್ರೀತಿ !

ಕೆಲವಕ್ಕೆ ಬೇಕೇಬೇಕು ಒಣ ಹವೆ ಮತ್ತು ಥಂಡಿ 
ಕೆಲವಕ್ಕೆ ನೀರು ಮೊಗೆಮೊಗೆದು ಧಂಡಿ
ಕೆಲವು ಅರಳಲಾರವು ಕಾಣದಿದ್ದರೆ ಬಿಸಿಲು 
ಮತ್ತೆ ಕೆಲವಕ್ಕೆ ಪಾಪ ಬಿಸಿಲೆಂದರೆ ದಿಗಿಲು 

ಇಲ್ಲಿದೆ ನೋಡಿ ಇದಕ್ಕೆನ್ನುತ್ತಾರೆ ‘ವಿಂಕ’
ಕನ್ನಡದ ಹೆಸರ ನಾ ತಿಳಿದಿಲ್ಲ ಮಂಕ !
ಬಿಸುಟಿದಲ್ಲಿ ಬೆಳೆಯುತ್ತದೆ ಇದಕಿಲ್ಲ ಬಿಂಕ 
ಮನೆಯ ಸುತ್ತಮುತ್ತೆಲ್ಲ ಇದರದೇ ಅಂಕ 

ಘಮಿಸುವ ಗಂಧವಿಲ್ಲ, ಹೊಳೆಯುವ ಚಂದವಿಲ್ಲ
ಪೂಜೆಗೆ ಬರುವುದಲ್ಲ, ಪ್ರೀತಿ ಸೂಸುವುದಿಲ್ಲ 
ನೀರು ಕೇಳುವುದಿಲ್ಲ ಬಿಸಿಲ ಗಣಿಸುವುದಿಲ್ಲ
ಎಲ್ಲಿಂದ ಕಿತ್ತು ಎಲ್ಲಿ ನೆಟ್ಟರೂ ಬೇಸರವಿಲ್ಲ

ಯಾವ ಹೆಗ್ಗಳಿಕೆಯಿಲ್ಲ, ಏನೂ ಬೇಡಿಕೆಯಿಲ್ಲ
ದಿನ ನಿತ್ಯ ನಾಲ್ಕು ಹೂವಿಗೆ ಮೋಸವಿಲ್ಲ !
ಸಿಕ್ಕಷ್ಟು ಪಡೆದು ತಕ್ಕಷ್ಟು ಕೊಡುವ ‘ವಿಂಕ’
ನಿನ್ನಂತೆ ನಾನಾದರೆ ಸಾಕು, ನಿಲ್ಲಿಸಲೇ ನನ್ನ ಶಂಖ ? 


Saturday, 25 April 2020

ನಮ್ಮ ಮನೆಯಂಗಳದ ಹೂವು

  




ಬೇಸಗೆಯ ದಿನಗಳಲ್ಲಿ 
ನಮ್ಮ ಮನೆಯಂಗಳದಲ್ಲಿ
ಹೂಗಳು ಸುರಿಯುತ್ತವೆ 
ಮಲ್ಲಿಗೆಯ ಬಳ್ಳಿಯಲ್ಲಿ

ನೋಡಿ ಪ್ರತಿಮುಂಜಾನೆ,
ಸಂತೋಷಪಡುತ್ತೇನೆ 
ಸುಗಂಧ ಸವಿಯುತ್ತೇನೆ 
ಚಿತ್ರ ತೆಗೆಯುತ್ತೇನೆ 
ಕಂಡಕಂಡವರ 
ಮುಂದಿರಿಸುತ್ತೇನೆ
ಸಂಭ್ರಮದಿಂದ

ನೋಡಿದವರು 
ನಸುನಗುತ್ತಾರೆ 
ಚಂದ ಎನ್ನುತ್ತಾರೆ 
ಸುಮ್ಮನಾಗುತ್ತಾರೆ 

ಅದೇ ಗಿಡ 
ಅದೇ ಹೂವು
ಹೊಸತೇನದರಲ್ಲಿ 
ಸಾಕಾಗದೆ ನಿಮಗೆ ? 
ಕೇಳಿಯೇ ಬಿಟ್ಟರು, 
ನನ್ನ ‘ಸಂಭ್ರಮ’ ಸಹಿಸಿ 
ಸಾಕಾದವರೊಬ್ಬರು 

ನಮ್ಮ ಅಂಗಳದ ಹೂವಲ್ಲವೇ 
ಮೊನ್ನೆ ನಾವು ಕಳಿಸಿದ್ದು 
ಮತ್ತೊಂದು ಅಂಗಳವ 
ಬೆಳಗಿಸುತ್ತ ಬಾಳಲೆಂದು ? 

ಕಂಡಾಗಲೆಲ್ಲ ನಮ್ಮಹೂವ
ತುಂಬಿ ಬರದೇ ಭಾವ ?
ಎಂದಾದರೂ ಸಾಕೆಂದಿತೇ
ಈ ಜೀವ ?


ರಘುನಂದನ - ಗೋವಾ 


( ನಮ್ಮ ಮಲ್ಲಿಗೆ ಬಳ್ಳಿ ನಾನು ನೆಟ್ಟದ್ದಲ್ಲ. ಮತ್ಯಾರೋ ತಂದು ನೆಟ್ಟದ್ದು. ಅದನ್ನು ಕಂಡಾಗಲೆಲ್ಲಾ ನನಗೆ
ನಿಸಾರ ಅಹಮದ್ದರ  ‘ಗೃಹಪ್ರವೇಶದ ಉಡುಗೊರೆ’ ಕವನ ನೆನಪಾಗುತ್ತದೆ. ಅದನ್ನು ಓದಲು 
ಬಯಸುವವರು ಇಲ್ಲಿ ಓದಬಹುದು.  https://maatu-kate.blogspot.com/ )

Tuesday, 21 April 2020

ಕರೋನ ಕವಿತೆ ?


ಸ್ನೇಹಿತರ ಮಧ್ಯೆ ಹರಟೆ ನಡೆದಿತ್ತು, 
ಅಂತರ ಕಾಯ್ದುಕೊಂಡು 
ಮೊಬೈಲ್ ಮೂಲಕ
ತಿಂಗಳಿಂದ ಕೆಲಸವಿಲ್ಲದೆ  ಕುಳಿತೆವಲ್ಲ 

ಯಾರೇನು ಮಾಡಿದಿರಯ್ಯಾ? 
ಮನೆಯಲ್ಲಿ ಕೂತು,  

ಚಿತ್ರ ಬರೆಯುತ್ತೇನೆ, ಒಬ್ಬನೆಂದ. 
ನಮ್ಮ ಗುಂಪಿನ ಕಲಾವಿದ 

“ಚಿತ್ರ ಬರೆಯುತ್ತೇನೆ, 
ಮನದ ಭಿತ್ತಿಯಮೇಲೆ,
ಭಾವನೆಯ ಬಣ್ಣಹಚ್ಚಿ, 
ಕಲ್ಪನೆಯ ಕುಂಚದಿಂದ”   
ಎರಡನೆಯವ, ಕವಿಯಂತೆ 
ನಮಗೆ ತಿಳಿಯದು ಅವನ ಮಾತು

ಹಾಡಲು ಕಲಿಯುತ್ತೇನಯ್ಯ
ಮೂರನೆಯವನೆಂದ

ಕಲಿಯಲಡ್ಡಿಯಿಲ್ಲ, ಕಲಿತದ್ದ ಕೇಳಿಸಿ  
ನಮ್ಮ ಕೊಲಬೇಡ - ಕುಹಕಿಯೊಬ್ಬನಿಂದ   

ಅಡಿಗೆ ಮಾಡಿದೆನೆಯ್ಯಾ ! ಹೆಡಿಗೆ ತುಂಬಾ 
ನಾಲ್ಕನೆಯವ 
ಉಂಡವರು ಬದುಕಿದ್ದಾರೇನಯ್ಯ? 
ಐದನೆಯ ಮಿತ್ರ. 

ಹೀಗೇ  ನಡೆದಿದ್ದಾಗ ಒಬ್ಬನೆಂದ,

ನಿಮಗೆ ಆಶ್ಚರ್ಯ ವಾದೀತೇನೋ, 
ಹೊಲಿಗೆ ಕಲಿಯುತ್ತಿದ್ದೇನೆ 
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ,  
ಒಮ್ಮೊಮ್ಮೆ ಸೊಟ್ಟಗಾಗಿ
ಕೆಟ್ಟೇ ಹೋಗುತ್ತದೆ.

ನಾನೂ  ಅಷ್ಟೇ, ಅಕ್ಷರ ಜೋಡಿಸಿ 
ಹೊಲಿಯಲು ಕಲಿಯುತ್ತಿದ್ದೇನೆ 
ಅರ್ಥ ಬರುವಂತೆ
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ 
ಒಮ್ಮೊಮ್ಮೆ ಕೆಟ್ಟೇ ಹೋಗುತ್ತದೆ ! 

  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...