Sunday, 4 April 2021

ರವಿ ನಾಚಿದ





ತನ್ನ ದಿಟ್ಟಿಸುವ 

ಚಂದಿರವದನದ  

ಚಲುವೆಯನು ಕಂಡು 

ರವಿ ನಾಚಿದ 

ಉರಿಮೋರೆ ರಂಗೇರಿ  

ಕದಪು ಕೆಂಪೇರಿ   

ಮೋಡಗಳ ಮರೆಸೇರಿ  

ರವಿ ಕಡಲಿಗಿಳಿದ !



Wednesday, 6 January 2021

ಅವನ ಚಿತ್ತ ! - ಇಂದು ಮುಂಜಾನೆಯ ಮಳೆ

ಅವನ ಚಿತ್ತ  ! 


ರವಿ, ಶಶಿಯರ 

ಸೃಷ್ಟಿಸಿದಾತ  

ಉದಯಾಸ್ತಗಳ 

ನೇಮಿಸಿದಾತ 

ನಮಗೆ  ಕಂಗಳನಿತ್ತ

ನೋಡಿ ನಲಿದಾಡುವ 

ಮನವನಿತ್ತ.  


ಎಳೆ ಬಿಸಿಲಿನಲಿ  

ಹಿತಗೊಳುವ  

ತಂಗಾಳಿಯಲಿ 

ಸುಖಪಡುವ 

ಮೊದಲಹನಿ ಬಿದ್ದ 

ಮಣ್ಣಿನಿಂದೆದ್ದ 

ಮೆಲುವಾಸನೆಯ  

ಮೂಸಿನಲಿವ

ಇಂದ್ರಿಯಗಳನಿತ್ತ 

ಅವನ ಚಿತ್ತ ! 


ಸುಡುವ ಬಿಸಿಲನಿತ್ತ 

ಹಸಿವ ಬರಗಾಲವನಿತ್ತ 

ಸುರಿವ ಮಳೆಯಿತ್ತ  

ಸೆಳೆವ ಪ್ರವಾಹವನಿತ್ತ

ಕಷ್ಟ ಕಾರ್ಪಣ್ಯವಿತ್ತ  

ರೋಗ ರುಜಿನವನಿತ್ತ 

ನೆಮ್ಮದಿಯ ಕಿತ್ತ 

ಅವನ ಚಿತ್ತ !


ಬಂದ ಧರೆಯತ್ತ 

ಧನುವ ಧರೆಗಿಟ್ಟವನತ್ತ  

ಸಖನ ಶಿರ ನೇವರಿಸುತ್ತ 

ಉಪದೇಶವ ನಮಗಿತ್ತ 

ನೋಡುವಿಯೇಕೆ ಅತ್ತಿತ್ತ 

ಎಲ್ಲವೂ ನನ ಚಿತ್ತ 

ನಡೆ ನಾ ನಡೆಸಿದತ್ತ 

ಸುಖದುಃಖದಲಿರಿಸಿ

ಸಮಚಿತ್ತ.   



ಇಂದು ಮುಂಜಾನೆಯ ಮಳೆ 


ಆಕಾಶಕ್ಕೆಲ್ಲಾ ಮೋಡಾಮುಚ್ಚಿ 

ಚಂದ್ರನ್ ಮೋರೆ ಮರೇ ಮಾಚಿ 

ಕತ್ಲಾಗ್ ಕುಂತ್ಕೊಂಡ್ ಈ ನಮ್ ದೇವ್ರು 

ತಟ್ಟಾ ತಟ್ಟಾ ಮಳೆ ಬುಡ್ತೌನೆ

ಮುನಿಯ ಯೆಂಡ ಬುಡುವಂಗೇನೆ !


(ಶ್ರೀ ರಾಜರತ್ನಂ ಅವರ ಕ್ಷಮೆಕೋರಿ)


ರಘುನಂದನ

Saturday, 21 November 2020

ಹರಿಯಪಾದಸೇರಿತು ದಾರ !

ಕಟ್ಟಿದ್ದಷ್ಟೇ ನನ್ನ 

ಕಾರ್ಯಭಾರ.  

ಅದರ ಹಣೆಯಲ್ಲಿತ್ತು, 

ಹಾರವಾಗಿ 

ಹರಿಯಪಾದಸೇರಿತು

ದಾರ !

Saturday, 14 November 2020

ಚಿತ್ರ - ಚುಟುಕ - ಬೇಲಿ ಬೆಳೆಯಿತು ! And ತೆಂಗು - ರಂಗು

ನೆಟ್ಟಗಿಡ ನಳನಳಿಸಿ 

ದಟ್ಟವಾಗಿ ಬೆಳೆಯಲೆಂದು 

ಘಟ್ಟಿಯಾದ ಬೇಲಿಯೊಂದ 

ಕಟ್ಟಿದೆವು ಸುತ್ತಲೂ 


ಗಿಡ ಉಳಿಯಲಿಲ್ಲ  

ಬಿಡಿ, ಪರವಾಗಿಲ್ಲ  

ಬೇಲಿಯಾದರೂ 

ಬೆಳೆಯಿತಲ್ಲ ! 






ತೆಂಗು - ರಂಗು 


ಅದೇ ಸಂಜೆ 

ಅದೇ ಸೂರ್ಯ 

ಅದೇ ತೆಂಗು 

ಅದೇ ರಂಗು 

ಅದಕೆ 

ಪ್ರಕೃತಿಯಿತ್ತ ಮೆರಗು 

ಎನಗೆ 

ನಿತ್ಯದ ಬೆರಗು !


Saturday, 7 November 2020

ಅವತರಿಸಿದೆ ಶರತ್ಕಾಲ.

ಶರತ್ಕಾಲ ಕಾಲಿಟ್ಟಂತೆ, ನಾನು ನಿತ್ಯ ಕಾಣುತ್ತಿರುವ  ಚಿತ್ರ. 

ಮಳೆಯಲ್ಲಿ ತೊಳೆದ ಸಸ್ಯರಾಶಿ ಹಚ್ಚಗೆ ನಳನಳಿಸುತ್ತಾ ತೆಳ್ಳನೆಯ ಮಂಜಿನ ಆವರಣದೊಳಗೆ ಮುಸುಗಿದೆ.

ಮಳೆಯಲ್ಲಿ ಮುದುಡಿದ್ದ ಪಾರಿಜಾತದ ಮೊಗ್ಗು, ಈಗ ಬಿರಿದು ಕಂಪು ಹರಡಿದೆ. ಬಾನಲ್ಲಿ ಬೆಳ್ಳಕ್ಕಿಗಳು ಗುಂಪು

ಗುಂಪಾಗಿ ಹಾರುತ್ತಿವೆ. ಮುಂಜಾನೆಯ ತಂಪಿನಲಿ ಹವ್ಯಾಸಿ ಕಲಾವಿದನೊಬ್ಬ ರಸ್ತೆಯ ಬದಿ ಕುಳಿತು ಕೊಳಲ

ವಾದನವನ್ನು  ಕರಗತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಮುಂಜಾನೆಯ ಅರೆಗತ್ತಲ ಈ

ಪರಿಸರದಲ್ಲಿ ಮನವರಳಿ ನಲಿಯುತ್ತದೆ.   



ಹಚ್ಚ ಹಸುರು ಸಸ್ಯರಾಶಿ 

ಧರೆಯುಟ್ಟ ಉಡುಗೆ.  

ಆವರಿಸಿದೆ ತೆಳು ಮಂಜಿನ 

ಬಿಳಿ ಮೇಲುದೆಯ ತೊಡುಗೆ  


ತಂಪೆಲರಲಿ ಸೂಸುತ್ತಿದೆ   

ಪಾರಿಜಾತದ ಕಂಪು 

ತನ್ನೊಟ್ಟಿಗೆ ಕರೆತಂದಿದೆ   

ಕೊಳಲದನಿ ಇಂಪು 


ಆಗಸದಿ  ಹಾರುತಿದೆ  

ಬಿಳಿ ಬೆಳ್ಳಕ್ಕಿ ಮಾಲೆ 

ಇಟ್ಟಂತೆ  ಮುಂಜಾನೆ  

ಮುಗಿಲಲ್ಲಿ ರಂಗೋಲೆ !


ಬಿರುಮಳೆಯಲಿ ತಣಿದು 

ಭುವಿ ಈಗ ತಂಪು

ಕಾಣಿರಿದು ನನ್ನೂರಿನ    

ಶರತ್ಕಾಲನ  ಪೆಂಪು ! 

  


Wednesday, 28 October 2020

ಕೊಕ್ಕಿಗೆ ಗುಕ್ಕು - ತೆಂಗಿನಹಿಂದೆ ರಂಗು






ತೆಂಗಿನ ಹಿಂಬದಿಯ 

ರಂಗಿನೋಕುಳಿಯಲ್ಲಿ 

ಕಂಗೊಳಿಸಿದ ಸೂರ್ಯ 

ಅಂತರಂಗದಿಂದೆಳೆದ 

ಕವಿಪುಂಗವರ ಸಾಲುಗಳ !


“ಪಟ್ಟಾಗಿ ಕುಡುದ್ಬುಟ್ಟಿ 

ತೂರಾಡ್ತ ತೂಗ್ತಾನೆ 

ಕಣ್ಗಳ್ನ ಕೆಂಪಿಗ್ಮಾಡ್

ತೇಲಿಸ್ತಾನೆ


ಅದಕಂಡು ಬೆಪ್ತಕಡಿ 

ನರಮನ್ಸ ಸೂರ್ಯನ್ನ 

ಅದಕಂತೆ ಇದಕಂತೆ 

ವೋಲಿಸ್ತಾನೆ !”


(ಶ್ರೀ ಜಿ ಪಿ ರಾಜರತ್ನಂ ಅವರ ‘ಸಮಾದಾನ’ ಪದ್ಯದಿಂದ )


 








ಹಕ್ಕಿ 
ಕೊಕ್ಕಗಲಿಸಿದಾಕ್ಷಣ 

ಗುಕ್ಕುಬಾಯಿಗೆ ಬಿತ್ತೇ!






Saturday, 3 October 2020

The Recipe - TPK - Baapu

ಗಾಂಧಿಜಯಂತಿ  ಸರಿಯುವ ಹೊತ್ತಿಗೆ ಶ್ರೀ ಟಿ ಪಿ ಕೈಲಾಸಂ ಅವರ ‘ರೆಸಿಪಿ’ ಪದ್ಯ ನೆನಪಾಯಿತು. 

ತತ್ತ್ ಕ್ಷಣದಲ್ಲಿ ತಿಳಿದಮಟ್ಟಿಗೆ ಕನ್ನಡಕ್ಕಿಳಿಸಿ ಇಲ್ಲಿರಿಸಿದ್ದೇನೆ.  


ಅಂಗೈಲಿಹಿಡಿಸುವಷ್ಟು ಮೂಳೆ, ಚಕ್ಕಳವ ತೆಗೆದುಕೊಂಡು 

ಅದರಲ್ಲಿ ಚಟಾಕಿನಷ್ಟು ರಕ್ತ ಮಾಂಸ ತುಂಬಿರಿ 

ಸಮುದ್ರದುಬ್ಬರವನ್ನು ಹೋಲುವ ಹೃದಯವೊಂದನ್ನಿರಿಸಿರಿ 

ಜತೆಗೆ ಸಮುದ್ರದಾಳದ ಪಾಪಕಾಣದ ಬುಧ್ಧಿಸೇರಿಸಿರಿ

ಎರಡು ಆನೆಕಿವಿ ಅಂಟಿಸಿರಿ, ಮತ್ತೆರಡು ಮಂದ ಕಣ್ಣುಗಳು

ತಾಯ ಎದೆಮೇಲಿನ ಹಸುಗೂಸಿನ ನಗುವ ಬರೆಯಿರಿ

ಹಿಮವತ್ಪರ್ವತದೆತ್ತರದ ಆತ್ಮವ ಒಳಗೆ ತೂರಿಸಿರಿ

ಜೇನಿಳಿಯುವಂಥ ನಾಲಗೆಯೊಂದಾಡುತಿರಲಿ

ಉಳಿದ ಜಾಗವ ಮೇಕೆಹಾಲು ಕಡಲೆಕಾಯಿಂದ ತುಂಬಿ

ಜೈಲಿನೊಳಗೆ ಕೆಲವು ವರುಷ ಬೇಯಿಸಿರಿ 

ಹೊರತೆಗೆದು ಸುತಮುತ್ತ ಹರಿಜನರ ಸಿಂಪಡಿಸಿರಿ 

ಚಿಂದಿಯಲಿ ಮುಚ್ಚಿ, ಒಂದು ಕೋಲ ಒತ್ತಾಸೆಗಿಟ್ಟು ನಿಲ್ಲಿಸಿರಿ

ಇದೋ ಕೊಳ್ಳಿ, ಜಗದೋದ್ಧ್ಹಾರಕ ನಮ್ಮ ‘ಬಾಪು’ವನ್ನು ಬಡಿಸಿರಿ!  


  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...