Monday, 7 October 2019

ಸಂಜೆರಂಗಿನ ನೋಟ - ಮಾಟ and "ಕವಿತೆ ಎಲ್ಲಿ ?"






ಹಗಲುರುಳಿ, ಇರುಳೊಡನೆ 
ಸೇರುತಿಹ ಸಂಧ್ಯೆಯಲಿ 
ಹರಿವ ನದಿ, ಮೊರೆವ ಕಡಲ
ಸಂಗಮಿಪ  ಸಂಧಿಯಲಿ 
ದಿಗಂತದ ರಂಗದಲಿ    
ಪ್ರಕೃತಿಯ ರಂಗಿನಾಟದ 
ಮೆರಗು, 
ಕಂಗಳಿಗೊಂದು ಬೆರಗು !   
(ನೋಟಕ್ಕೆ,ಮಾಟಕ್ಕೆ   
ಮರುಳಾದ, 
ಕಣ್ ಮನ ನಗಳಿಗೆ 
ಇರುಳು 
ಎಂತಾಯಿತೋ
ಎಂಬುದೇ  
ಅರಿಯದಾಯಿತು !)


ಕವಿತೆ ಎಲ್ಲಿ ?


It is my practice to usually write a few lines to accompany a picture.
My writings are more of a rhyming caption rather than a poem.
Yesterday I posted a few pictures without any caption/poem.
One of my friends questioned, “ಕವಿತೆ ಎಲ್ಲಿ ?" Following is the answer ! 


ಎದೆಯೊಳಗೆ ಒಸರಿದರೆ
ಭಾವಗಳ ಒರತೆ, 
ನಾನೂ ಕೊರೆವೆ
ಒಂದೆರಡು ಕವಿತೆ 


ಇಲ್ಲ, ತಲೆದೂಗುವ 
ಸಹೃದಯರ ಕೊರತೆ
ಆದರೆ 
ಅವರ ಔದಾರ್ಯಕೂ
ಉಂಟಲ್ಲವೇ ಅಳತೆ ? 


ಕೊರೆತ ಮಿತಿಮೀರಿದರೆ
ಎರವಾದೀತೆಂದರಿತೆ
ಅದರಿಂದಲೇ ಈ ಬಾರಿ
ಕವಿತೆಯ ಮರೆತೆ !

















Monday, 26 August 2019

ಕೊರಡಿಗೆ ಸೌಂದರ್ಯ ಮತ್ತು ಮೂಡಣದ ಕೆಂಪು

ಹಚ್ಚ ಹಸಿರಿನ
ನಡುವೆ 
ಅಚ್ಚಬಿಳಿ
 ನಾಯಿಕೊಡೆ 
ತಲೆಯೆತ್ತೊಡೆ
ಬಂತು  
ಬರಡು  
ಕೊರಡಿಗೆ
ಎರಡು ಕ್ಷಣ 
ಕೊಂಚ ಲಕ್ಷಣ ! 






ಇಡೀ ರಾತ್ರಿ ಜಡಿದು,
ಜಗವ ತೊಳೆದ 
ಮಳೆಬಿಟ್ಟು, 
ಮುಂಜಾನೆ ಮೂಡಣದಿ
ತೊಳೆದ ಗುಡ್ಡಗಳ  
ನಡುವೆ ಕಂಡಿತು 
ಕೊಂಚವೇ ಕೆಂಪು. 
ನಮ್ಮಮ್ಮ, ನಸುಕಿನಲಿ,
ಮುಂಬಾಗಿಲ 
ಹೊಸಿಲ ತೊಳೆದು 
ಹಚ್ಚುತ್ತಿದ್ದ

ಕೆಂಪು ಕುಂಕುಮದಂತೆ !



'Maayaaloka' - A Poem

ಈಗೆರಡು ತಿಂಗಳ ಹಿಂದೆ ಜೂನ್ ತಿಂಗಳಲ್ಲಿ ಎರಡುವಾರಕಳೆದರೂ  ಮಳೆಯ ಸುಳಿವು
ಕಾಣದಾದಾಗ ದಿಗಂತದಲ್ಲೆಲ್ಲಾದರೂ ಮೋಡಕಂಡೀತೇನೋ ಎಂದು ಕತ್ತು ಚಾಚಿನೋಡಿದೆವು.
ಜುಲೈ ಮೊದಲವಾರದಲ್ಲಿ ಶುರುವಾದಮಳೆ ನಿರಂತರ ಸುರಿಯತೊಡಗಿ, ನಿಲ್ಲುವ ಲಕ್ಷಣ ಕಾಣದಿರುವಾಗ,
ಎರಡು ಸೂರ್ಯನಕಿರಣ ಕಂಡರೆ ಅದೇನೋ ಸಂಭ್ರಮ ಎನಿಸುತ್ತಿದೆ. ನಾವಿರುವ ಗೋವಾದಲ್ಲಿ ಇದು
ಪ್ರತಿವರುಷದ ಗತಿಯಾದರೂ, ಈ ವರುಷ ಮಳೆ ಕೊಂಚ ಹೆಚ್ಚು ಸುರಿಯಹತ್ತಿದೆ. ಈ ನಮ್ಮ ಪರಿಸ್ಥಿತಿಯನ್ನು
ನೆನೆದಾಗ ಮನದಲ್ಲಿ ಮೂಡಿದಸಾಲುಗಳು.


ಚೈತ್ರ - ವೈಶಾಖ  

ಬೇಸಗೆಯ ಬಿಸಿಲು ಬೀಗಿ  
ಧರೆ ಕಾದು ಕಾವಲಿಯಾಗಿ 
ಒಳಹೊರಗೆ ಧಗೆಯಾಗಿ 
ತನು ಮನಗಳೆರಡೂ 
ಹಪಹಪಿಸಿ ಕಾದವು ಮಳೆಗಾಗಿ 

ನೀಲ ಗಗನದ  ಕೊನೆಗೆ ಕರಿಮೋಡದ ಅಂಚು  
ಅದರ ಮಧ್ಯದಲೊಂದು ಕುಣಿವ ಕೋಲ್ಮಿಂಚು 
ಕಾದ ಮಣ್ಣಿನಮೇಲೆ ಹನಿ ಬಿದ್ದ ಸುವಾಸನೆ 
ಹಾಯೆನಿಸಿ ಸುಳಿವ ತಂಗಾಳಿಯ ರವಾನೆ 

ಜ್ಯೇಷ್ಠ -  ಆಷಾಢ 

ಸೂರಮೇಲಿನ ತಟಪಟ ಕಿವಿಗೆನಿಸಿತು ಇಂಪು 
ಬದಲಾದ ಹವೆ ಎಂಥ ಆಹ್ಲಾದ, ತಂಪು
ಈ ಮಳೆಗಾಲ ಮಾಡಿತದೇನು ಮಾಯೆ?
ಎಲ್ಲೆಲ್ಲೂ ಕಂಗೊಳಿಸುವ ಹಸಿರ ಛಾಯೆ !

ಓತಪ್ರೋತ ಸುರಿವ ನೀರಿನ ಧಾರೆ 
ಕರಿಮೋಡದಿ ಮುಚ್ಚಿಹೋಗಿದೆ ರವಿಯ ಮೋರೆ 
ನೀರು ಹರಿದೆಡೆಯೆಲ್ಲಾ ಹಸಿರಪಾಚಿ 
ಹರಡಿ ಕಾಳ್ಸೆಳೆಯುತಿದೆ ಎಲ್ಲೆಡೆ ಕೈಚಾಚಿ 

ಅಂದು ಬಯಸಿ ಬೇಡಿದೆವು ಗಂಗಾವತರಣ 
ಇಂದುಬೇಕೆನಿಸಿದೆ ಎರಡು ಸೂರ್ಯನ ಕಿರಣ 
ಇದಲ್ಲವೇ ನಮ್ಮ ಈ ಜಗದ ಕೌತುಕ ?
ಅಂತೆಯೇ ತಿಳಿದವರೆಂದರು ಇದು ಮಾಯಾಲೋಕ ! 



Friday, 19 April 2019

ಸಾರ್ವತ್ರಿಕ ಚುನಾವಣೆ And ಚಂದಿರನ ಹಿಂಜರಿಕೆ

ಬೇಕೆ ನಿಮಗೆ ಏಳಿಗೆ ?
ಹಾಕಿ ವೋಟು ಮೋದಿಗೆ
ನಿಮ್ಮ ಮುಂದಿನ ಹಾದಿ ?
ಆಗಲಿ ರಾಹುಲ ಗಾಂಧಿ
ಬಂಗಾಳದ ಬ್ಯಾನರ್ಜಿ ?
ಆ ಹೆಸರೇ ನಮಗೆ ಅಲರ್ಜಿ!
ಮತ್ತೆ ಮಾತೆ ಜಯಲಲಿತಾ
ಸತ್ತರೂ ಕಾಯ್ವಳು ನಿಮ್ಮ ಹಿತ.
ಗತ ಪಿತಾಮಹ ಕರುಣಾನಿಧಿ
ಅವನ ಬಿಟ್ಟು ಮತ್ತೇನು ವಿಧಿ?
ಇನ್ನು ಆಂಧ್ರದ ರೆಡ್ಡಿಗಳು
ಕಾಂಗ್ರೆಸ್ಸಿನ ಕಬಾಬಿನ ಹಡ್ಡಿಗಳು
ತೆಲಂಗಾಣದ ರಾವೋ
ಅದೇನು ಅವನ ಕಾವೋ!
ಬಿಹಾರದಲ್ಲಿ ನಿತೀಶ ಕುಮಾರ
ನೋಡಬೇಕು ಅವನೆಂಥ ವೀರ
ನಮ್ಮ ಲಾಲು ಪ್ರಸಾದ
ಆವ ಜೈಲಿನಲ್ಲಿದ್ದರೂ ಯೋಧ!
ಮಾಯಾ - ಅಖಿಲೇಶ ಒಂದೇ
ನಿಮ್ಮ ವೋಟು ಗಿಟ್ಟಿಸಲೆಂದೇ!


ಈ ಯಾರದೂ ಬೇಡ ಎನಗೆ ಕಾಟ
ಅದಕ್ಕೆಂದೇ ಇದೆ ಇಗೋ ನೋಟಾ !

ಇದು ನಮ್ಮ ಸಾರ್ವತ್ರಿಕ ಚುನಾವಣೆ
ಅದ ಮೀರಿದ ಮನರಂಜನೆ ನಾ ಕಾಣೆ!


ಚಂದಿರನ ಹಿಂಜರಿಕೆ




ಮೇಘಮಾನಿನಿಯ  
ಸೆರಗ ಮರೆಯಿಂದ
ಹೊರಸರಿಯೆ     
ಚಂದಿರ
ಹಿಂಜರಿಯುತಿಹನೇಕೆ ?

ತಾರೆಯ
ಕಣ್ಗಾವಲ  
ವಾರೆನೋಟ  
ಸರಿದು ಕೊಂಚ
ದೂರವಾಗಬೇಕೇ ?






Saturday, 23 February 2019

ಹೂವಿನ ಚುಕ್ಕೆ, ಭಿತ್ತಿಯಾದ ಬಾನು , ಬೆಟ್ಟ ಹಿಮಾಲಯವಾಗದೋ





ಚೆನ್ನೈ ದಿಂದ ಬೆಂಗಳೂರಿಗೆ ಪಯಣಿಸುವಾಗ, ಜೋಲಾರಪೇಟೆ ನಿಲ್ದಾಣ ದಾಟಿದ ಮೇಲೆ ಕಾಣಸಿಗುವ ದೂರದ ಬೆಟ್ಟಗಳ  
ತುದಿಯಲ್ಲಿದ್ದ ಬಿಳಿಕಲ್ಲಿನ ಬಂಡೆಗಳು, ಶಿಖರಕ್ಕೆ ಮುಸುಕಿದ ಹಿಮದಂತೆ ಕಂಡವು. ಆ ದೃಶ್ಯ ಕಂಡಾಗ ಮನಸ್ಸಿಗೆ
ಹೊಳೆದ ಸಾಲುಗಳು

ಹೊಳೆವುದೆಲ್ಲ  ಬಂಗಾರವಲ್ಲ,
ಬೆಳ್ಳಗಿರುವುದೆಲ್ಲ ಹಾಲಲ್ಲ,
ದೂರ ಬೆಟ್ಟದ ಮೇಗಡೆ
ಬಿಳಿ ಮುಸುಕು ಕಂಡೊಡೆ
ಮುಸುಕು ಹಿಮವಾಗದು
ಬೆಟ್ಟ ಹಿಮಾಲಯವಾಗದೋ
ಮರುಳೇಶ್ವರಾ



ಹಚ್ಚ ಹಸಿರಿನ ನಡುವೆ
ಅಚ್ಚ ಬಿಳಿ ಹೂ ಚುಕ್ಕೆ,
ಕಾರಿರುಳ ಆಗಸದಿ   
ಚಿಕ್ಕೆಗಳ ಚುಕ್ಕೆ    


ಒಮ್ಮೊಮ್ಮೆ ಕಂಡಾಗ   
ಒಂದೊಂದು ಹೊಸಪರಿ
ಬಣ್ಣಿಸಬಯಸಿ ಸೋತೆ

ನಾ ಬಾರಿ ಬಾರಿ

ಭಿತ್ತಿಯಾದ ಬಾನು


ಬಾನಿನ ಭಿತ್ತಿಯಮೇಲೆ
ಸಂಜೆಯ ಬಣ್ಣ ಹರಡಿ   
ರೆಂಬೆ ಕೊಂಬೆ ಕುಂಚದಿಂದ
ಪ್ರಕೃತಿ ಬಿಡಿಸಿದ
ಬೆರಗಿನ ಚಿತ್ರ !




Wednesday, 6 February 2019

ಮೂರು ಹೆಸರಿಲ್ಲದ ಸಣ್ಣ ಕವಿತೆಗಳು



ಮೋಡ  ಮುಚ್ಚಿದ ಮುಂಜಾನೆ
ಮೋರೆ ಮುಚ್ಚಿಕೊಂಡಿದ್ದ ಸೂರ್ಯ
ಮುಗಿಲ ಕೆಂಪಾಗಿಸ ಮರೆತಾಗ
ಮನೆಯ ಮುಂದಿನ ಮರ
ಮನಬಿಚ್ಚಿ ತನ್ನ ಕೆಂಪನ್ನಿತ್ತು

ಮನವ ಮುದಗೊಳಿಸಿತು 



ಸದ್ದಿಲ್ಲದೆ ಸೂರ್ಯ ಮೂಡಣದೊಳೆದ್ದಿಹನು
ನಿದ್ದೆ ಕದ್ದೊಯ್ಯಲೆಂದು ! 

ದಿನಕ್ಕಿಂತ ಚಳಿ
ಇಂದು ಕೊಂಚ ಹೆಚ್ಚು.
ಸೂರ್ಯನೂ ಮುದುರಿ
ಮಲಗಿದ್ದಾನೆ
ತೆಳ್ಳನೆಯ ಮೋಡಗಳ
ಹಚ್ಚಡ ಹೊದ್ದು.
ಅವನಿಗುಂಟು ಆ ಸ್ವಾತಂತ್ರ್ಯ
ನಮಗುಂಟೆ?

ಘಂಟೆಯ ದಾಸರಿಗೆ ?
ಎಂಟಾಗುತ್ತ ಬಂತು
ಉಂಟು ಹದಿನೆಂಟು ಕೆಲಸ
ಹೊಂಟೆ ನೆಂಟರೆ
ಶುಭದಿನ ನಿಮಗೆ
















Tuesday, 5 February 2019

ಕಲಿಯುಗಕೆ ಸಿಲುಕಿಹ ಭಜರಂಗಬಲಿ

ಅಂಜನಿಯ ಸುತ ಆಂಜನೇಯ,
ಪಿಡಿದು ವಜ್ರಾಯುಧದಿ ಬಡಿದರೂ
ದವಡೆಮಾತ್ರ ಬಲಿಕೊಟ್ಟು,
ಹನೂಮಂತನಾಗುಳಿದೆ


ತ್ರೇತೆಯಲ್ಲಿ  ರಾಮಭಂಟ
ಸಾಗರವ ದಾಟಲೆರಗಿ
ಸುರಸೆ ನುಂಗಬಯಸಿದಾಗ
ಸರಸದಿಂದ  ಬಾಯಹೊಕ್ಕು
ವಿರಸವಿಲ್ಲದೆ ಹೊರಬಂದೆ !


ದ್ವಾಪರದಿ ದುರ್ಯೋಧನ
ಬೆಂಕಿಯಿಟ್ಟರೂ ಬದುಕುಳಿದು
ಗದೆಯೆದುರಿಸಿ,ಸದೆಬಡಿದು
ಬಲಭೀಮನೆನಿಸಿಕೊಂಡೆ


ಭಜರಂಗಬಲಿ ಎನಿಸಿ  
ಕಲಿಗಾಲದಿ ನಲಿದವನು
‘ದಲಿತ’ ನಾದ ಮರುಕ್ಷಣವೇ
‘ಆಲಿ’ ಯಾಗಿ ಹೋದೆಯಲ್ಲಾ !

ಕಲಿಯುಗದ ಕಲಿಗಳಿಗೆ   
ಸಿಲುಕಿಹೆ ಹನುಮಾ,
ಬಲಿಯಾಗುವೆ ಹುಲುಮನುಜರಿಗೆ !
ಕಾಲಪಿಡಿದ ಎನ್ನ
ಕಾಳಜಿಬಿಟ್ಟು, ನಿನ್ನ
ಬಾಲಉಳಿಸಿಕೊಳೋ ಜೀವೋತ್ತಮಾ !




  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...